ಗ್ರಾಮೀಣ ಭಾಗಗಳಲ್ಲಿ ಬಸ್‌ ಓಡಿಸಲು ಪರವಾನಿಗೆ

ಮಣಿಪಾಲ: ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಸಭಾಂಗಣದಲ್ಲಿ ಉಡುಪಿ ಜಿಲ್ಲಾಧಿಕಾರಿ, ಜಿಲ್ಲಾ ಸಾರಿಗೆ ಪ್ರಾಧಿಕಾರದ ಅಧ್ಯಕ್ಷ ಡಾ| ವಿಶಾಲ್‌ ಆರ್‌. ಅಧ್ಯಕ್ಷತೆಯಲ್ಲಿ ಜರಗಿದ ಆರ್‌ಟಿಎ ಸಭೆಯಲ್ಲಿ ಗ್ರಾಮೀಣ ಭಾಗಗಳಲ್ಲಿ ಬಸ್‌ ಸೌಕರ್ಯ ಇಲ್ಲದಿರುವ ಬಗ್ಗೆ ಪ್ರಸ್ತಾವಿಸಲಾಯಿತು. ಸಾರ್ವಜನಿಕರ ಬೇಡಿಕೆಯ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗಗಳಲ್ಲಿ ಬಸ್‌ ಓಡಿಸಲು ಜಿಲ್ಲಾ ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಪರವಾನಿಗೆ ಮಂಜೂರು ಮಾಡಿದೆ.

ಬಸ್‌ ಮಾಲಕರ ಸಂಘದ ಕಾರ್ಯದರ್ಶಿ ಕುಯಿಲಾಡಿ ಸುರೇಶ್‌ ನಾಯಕ್‌ ಅವರು ಮಾತನಾಡಿ, "ಸಾರ್ವಜನಿಕರ ಬೇಡಿಕೆಯಂತೆ ಬೈಂದೂರಿನ ಹೇನ್‌ಬೇರು ಸಂಪರ್ಕಿಸುವ ರಸ್ತೆ ಸೇರಿದಂತೆ ಬಸ್‌ ಸೌಕರ್ಯ ಇಲ್ಲದ ಕೆಲವು ರಸ್ತೆಗಳಲ್ಲಿ ಬಸ್‌ ಓಡಿಸಲು ಬಸ್‌ ಮಾಲಕರು ಪರವಾನಿಗೆಯನ್ನು ಈ ಹಿಂದೆಯೇ ಕೇಳಿದ್ದರು. ಆದರೆ ಪರವಾನಿಗೆ ದೊರೆತಿರಲಿಲ್ಲ. ಅಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ಓಡಿಸುತ್ತಿಲ್ಲ. ಖಾಸಗಿಯವರಿಗೂ ಅವಕಾಶ ನೀಡಿಲ್ಲ' ಎಂದು ಗಮನ ಸೆಳೆದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಯವರು "ಆವಶ್ಯಕತೆ ಇರುವಲ್ಲಿ ಬಸ್‌ ಓಡಿಸಲು ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ಬಸ್‌ ಇರುವಲ್ಲಿ ಮತ್ತು ಬಸ್‌ ಸಂಚಾರಕ್ಕೆ ಅಯೋಗ್ಯವಾದ ಇಕ್ಕಟ್ಟಿನ ಸ್ಥಳಗಳಲ್ಲಿ ಅವಕಾಶ ಕೊಡುವುದಿಲ್ಲ' ಎಂದರು.

ಸಭೆಯ ಅಂತ್ಯಕ್ಕೆ ಸೌಡ, ಮೊಳಹಳ್ಳಿ, ಬೈಂದೂರು ರೈಲು ನಿಲ್ದಣ, ಎಳ್ಳಾರೆ, ಶೇಡಿಮನೆ, ಅಮಾವಾಸೆಬೈಲು ಮೊದಲಾದ ಗ್ರಾಮಗಳಿಗೆ ಆದ್ಯತೆ ಮೇರಿಗೆ ಪರವಾನಿಗೆ ಮಂಜೂರು ಮಾಡಲು ತೀರ್ಮಾನಿಸಲಾಯಿತು. ಅಲ್ಲದೆ ಬೈಂದೂರು ಒತ್ತಿನೆಣೆಯಲ್ಲಿ ಸಾರ್ವಜನಿಕರ ಕೋರಿಕೆಯಂತೆ ಶಾಲಾ ಮಕ್ಕಳಿಗೆ ಅನುಕೂಲವಾಗುವಂತೆ ಕೋರಿಕೆ ಬಸ್‌ ನಿಲುಗಡೆ ನೀಡಲು ಕೆಎಸ್‌ಆರ್‌ಟಿಸಿಯವರಿಗೆ ಸೂಚಿಸಲಾಯಿತು.

ಖಾಸಗಿ ಬಸ್‌ಗಳಲ್ಲಿ ನಿಗದಿಪಡಿಸುವ ದರಕ್ಕಿಂತ ಹೆಚ್ಚಿನ ದರವನ್ನು ವಸೂಲಿ ಮಾಡುತ್ತಿರುವ ಬಗ್ಗೆ ಕಾರ್ಕಳ, ಗಂಗೊಳ್ಳಿ ಮೊದಲಾದೆಡೆಗಳ ಸಾರ್ವಜನಿಕರು ದೂರಿದರು. ಇದನ್ನು ತನಿಖೆ ಮಾಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಯವರು ಆರ್‌ಟಿಒಗೆ ಸೂಚಿಸಿದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com