ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧ ದಿನಾಚರಣೆ

ಕುಂದಾಪುರ: ಇಲ್ಲಿನ ತಾಲೂಕು ಪಂಚಾಯತ್‌ ಸಭಾಂಗಣದಲ್ಲಿ  ತಾಲೂಕು ಕಾನೂನು ಸೇವಾ ಸಮಿತಿ ಕುಂದಾಪುರ, ವಕೀಲರ ಸಂಘ (ರಿ.) ಕುಂದಾಪುರ, ಅಭಿಯೋಗ ಇಲಾಖೆ, ತಾಲೂಕು ಆಡಳಿತ ಕುಂದಾಪುರ ಇವರ  ಆಶ್ರಯದಲ್ಲಿ  ನಡೆದ ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧ ದಿನಾಚರಣೆಯನ್ನು ಆಚರಿಸಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕುಂದಾಪುರ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ರಾಜಶೇಖರ ವಿ.ಪಾಟೀಲ್‌ ಬಾಲ ಕಾರ್ಮಿಕ ಪದ್ಧತಿ ಸಮಾಜಕ್ಕೆ ಅಂಟಿಕೊಂಡಿರುವ ಒಂದು ಪಿಡುಗು. ಜನರಲ್ಲಿ ಜಾಗೃತಿ ಮೂಡಿಸುವ ಮೂಲಕ ಈ ಪಿಡುಗಿನ ನಿರ್ಮೂಲನೆ ಸಾಧ್ಯ,  ಸರಕಾರ ಗುರುತರವಾದ ಜವಾಬ್ದಾರಿ ಹೊತ್ತು ಬಾಲ ಕಾರ್ಮಿಕ ಪದ್ಧತಿಯನ್ನು  ತೊಲಗಿಸುವಲ್ಲಿ  ಪ್ರಯತ್ನಶೀಲವಾಗಬೇಕಾಗಿದೆ ಎಂದು  ಹೇಳಿದರು.

ಕೇವಲ ಕಾನೂನು ಅನುಷ್ಠಾನಗಳಿಂದ  ಈ ಪದ್ಧತಿಯನ್ನು ಹೋಗಲಾಡಿಸಲು ಸಾಧ್ಯವಿಲ್ಲ. ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ  ಮಕ್ಕಳ  ತಂದೆ-ತಾಯಿ ಪೋಷಕರಲ್ಲಿ  ಅರಿವು ಮೂಡಿಸುವ ಮೂಲಕ ಸಮಾಜದಲ್ಲಿ ಈ ಪಿಡುಗನ್ನು ಹೋಗಲಾಡಿಸಲು ಸಾಧ್ಯ. ಅದರೊಂದಿಗೆ ಸರಕಾರ ಜವಾಬ್ದಾರಿ ಹೊತ್ತು ಬಾಲಕಾರ್ಮಿಕರಾಗಿ ಕಂಡು ಬಂದ ಮಕ್ಕಳಿಗೆ  ಪುನರ್‌ಜೀವನವನ್ನು ಕಲ್ಪಿಸುವಲ್ಲಿ ಕ್ರಮತೆಗೆದುಕೊಂಡರೆ ಮಾತ್ರ ಈ ಪಿಡುಗು ಹೋಗಲಾಡಿಸಲು ಸಾಧ್ಯ ಎಂದರು.

ಕುಂದಾಪುರ ವಕೀಲರ ಸಂಘದ  ಅಧ್ಯಕ್ಷ ಎ.ಬಿ.ಶೆಟ್ಟಿ  ಅಧ್ಯಕ್ಷತೆ ವಹಿಸಿದ್ದರು.  ಸಹಾಯಕ ಸರಕಾರಿ ಅಭಿಯೋಜಕಿ ಸುಮಂಗಲಾ ನಾಯ್ಕ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ನಾರಾಯಣ ಸ್ವಾಮಿ, ಸಮಗ್ರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸದಾನಂದ ನಾಯ್ಕ,  ಕುಂದಾಪುರ ಪ್ರಭಾರ ಶಿಕ್ಷಣಾಧಿಕಾರಿ ಎಚ್‌.ಶೋಭಾ ಶೆಟ್ಟಿ  ಉಪಸ್ಥಿತರಿದ್ದರು. ನ್ಯಾಯವಾದಿ ಶಿರಿಯಾರ ಗೋಪಾಲ ಕೃಷ್ಣ ಶೆಟ್ಟಿ ಅವರು  ಬಾಲ ಕಾರ್ಮಿಕ ತಡೆ ಕಾಯಿದೆ ಕುರಿತು ಮಾತನಾಡಿದರು.

ವಕೀಲರ ಸಂಘದ ಕಾರ್ಯದರ್ಶಿ ಶಿರಿಯಾರ ಮುರಳೀಧರ ಶೆಟ್ಟಿ ಸ್ವಾಗತಿಸಿ, ಕುಂದಾಪುರದ ಕಾರ್ಮಿಕ ಅಧಿಕಾರಿ ಡಿ.ಎಸ್‌.ಸತ್ಯನಾರಾಯಣ  ಪ್ರಾಸ್ತಾವಿಕವಾಗಿ ಮಾತನಾಡಿದರು. ಭಾಗ್ಯವತಿ ಕಾರ್ಯಕ್ರಮ ನಿರೂಪಿಸಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com