ವ್ಯಕ್ತಿ ಮೇಲೆ ಹಲ್ಲೆ: ಆರಕ್ಷಕ ಠಾಣೆ ಎದುರು ಪ್ರತಿಭಟನೆ

ಕೊಲ್ಲೂರು: ಗ್ರಾಮ ಪಂಚಾಯಿತಿನ ಚುನಾವಣೆಯ ದಿನದಂದು ಕುಂದಾಪುರ ತಾಲೂಕಿನ ಕೆರಾಡಿ ಗ್ರಾಮದ ಬೆಳ್ಳಾಲ ಮೂಡುಮುಂದ ವಾರ್ಡ್‌ನಲ್ಲಿ ಮತ ಚಲಾಯಿಸಲು ಆಗಮಿಸಿದ ಬಾಲಕೃಷ್ಣ ಶೆಟ್ಟಿ ಎಂಬುವವರ ಮೇಲೆ ಮಂಜುನಾಥ ಮೊಗವೀರ ಹಾಗೂ ಆತನ ಸಂಗಡಿಗರಾದ ಮಹಾಬಲ ಮೊಗವೀರ, ಚಂದ್ರ ಪೂಜಾರಿ ಅವರು ಗ್ರಾಮಸ್ಥರ ಎದುರಿನಲ್ಲಿಯೇ ಹಲ್ಲೆ ನಡೆಸಿದ್ದು, ಅವರ ವಿರುದ್ಧ ಪ್ರಕರಣ ದಾಖಲಿಸಿದ್ದರು. ಪೋಲಿಸ್ ಇಲಾಖೆ ಇದುವರೆಗೆ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಬೆಳ್ಳಾಲ ಗ್ರಾಮಸ್ಥರು ಕೊಲ್ಲೂರು ಪೊಲೀಸ್ ಠಾಣೆ ಎದುರು ನೂರಾರು ಸಂಖ್ಯೆಯಲ್ಲಿ ಜಮಾಯಿಸಿ ಪ್ರತಿಭಟನೆ ನಡೆಸಿ, ಬೈಂದೂರು ವೃತ್ತ ನಿರೀಕ್ಷಕರಿಗೆ ಮನವಿ ಸಲ್ಲಿಸಿದರು.

ಮಾರಣಾಂತಿಕ ಹಲ್ಲೆ ನಡೆಸಿದ ಆರೋಪಿ ಮಂಜುನಾಥ ಮೊಗವೀರ ರಾಜಾರೋಷವಾಗಿ ತಿರುಗಾಡಿಕೊಂಡು, ಪರಿಸರದಲ್ಲಿ ಭಯದ ವಾತವರಣ ಸೃಷ್ಟಿಸುತ್ತಿದ್ದಾನೆ. ಸಂಜೆ ಹೊತ್ತು ತನ್ನ ಸಂಗಡಿಗರೊಂದಿಗೆ ಮಾರಕಾಸ್ತ್ರಗಳನ್ನು ಹಿಡಿದುಕೊಂಡು ತನ್ನ ವಿರುದ್ಧ ಧ್ವನಿ ಎತ್ತುವವರನ್ನು ಸಾಯಿಸುತ್ತೇನೆ ಎಂದು ಬೆದರಿಕೆಯೊಡ್ಡತಿದ್ದಾನೆ. ತನ್ನ ಕೃತ್ಯಗಳಿಗೆ ರಾಜಕೀಯ ವ್ಯಕ್ತಿಗಳ ಸಹಕಾರವಿರುವುದಾಗಿ ಹೇಳಿಕೊಳ್ಳುತ್ತಿದ್ದು, ಈತನ ವಿರುದ್ಧ ಮಹಿಳೆಯರಿಗೆ ಕಿರಿಕುಳ, ಸಮಾಜ ವಿದ್ರೋಹಿ ಕೃತ್ಯಗಳ ಕುರಿತು ಆರೋಪಗಳಿವೆ ಎಂದು ಪ್ರತಿಭಟನಾಕಾರರರು ಆರೋಪಿಸಿದ್ದಾರೆ.


ಅಲ್ಲದೇ ಆರೋಪಿ ಮಂಜುನಾಥ ಮೊಗವೀರ ಗ್ರಾಮದಲ್ಲಿ ಪದೇ ಪದೇ ಅಹಿತಕರ ಘಟನೆಗಳಿಗೆ ಕಾರಣಿಕರ್ತನಾಗಿದ್ದು, ಭಯದ ವಾತವರಣ ಮೂಡಿಸಿ, ಸಾರ್ವಜನಿಕರ ನೆಮ್ಮದಿ ಭಂಗ ತರುತ್ತಿದ್ದಾನೆ. ಭಯದಿಂದಾಗಿ ಈತನ ವಿರುದ್ಧ ಯಾರು ಪ್ರಕರಣ ದಾಖಲಿಸಲು ಮುಂದೆ ಬರುತ್ತಿಲ್ಲ. ಆದ್ದರಿಂದ ಶೀಘ್ರ ಆರೋಪಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಪ್ರತಿಭಟನಾ ಮನವಿಯಲ್ಲಿ ತಿಳಿಸಿದ್ದಾರೆ.

ಬೆಳ್ಳಾಲ ಗ್ರಾಮಸ್ಥರಿಂದ ಮನವಿ ಸ್ವೀಕರಿಸಿದ ಬೈಂದೂರು ವೃತ್ತ ನಿರೀಕ್ಷಕ ಎಂ.ಸುದರ್ಶನ್ ಪ್ರತಿಕ್ರಿಯಿಸಿ, ಮಂಜುನಾಥ ಮೊಗವೀರ ಎಂಬುವವರ ಮೇಲೆ ಈಗಾಗಲೇ ಕೊಲ್ಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಲ್ಲದೇ ಈಗಾಗಲೇ ವಿಚಾರಣೆ ನಡೆಸಿದ್ದು ಶೀಘ್ರ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.

ರಾಜ್ಯ ಬಿಜೆಪಿ ರೈತಮೋರ್ಚಾದ ಉಪಾಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಗುರುರಾಜ ಗಂಟಿಹೊಳೆ, ಕಾರ್‍ಯದರ್ಶಿ ಬಿ.ಎಸ್. ಸುರೇಶ್ ಶೆಟ್ಟಿ, ಮುಖಂಡರಾದ ಸುದರ್ಶನ ಶೆಟ್ಟಿ, ಶರತ್ ಕುಮಾರ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com