ಜನಸಂಪರ್ಕ ಸಭೆಯಲ್ಲಿ ಎಸ್ಪಿಯಿಂದ ಅಹವಾಲು ಸ್ವೀಕಾರ; ಸಮಸ್ಯೆಗಳ ಕುರಿತು ಪರಾಮರ್ಶೆ

ರತ್ನಾ ಕೊಠಾರಿ ಪ್ರಕರಣ, ಮಹಿಳೆಯ ಸುರಕ್ಷೆ, ಊರಿನ ಸಮಸ್ಯೆಗಳ ಬಗ್ಗೆ ಚರ್ಚೆ
ಬೈಂದೂರು: ಇಲ್ಲಿನ ಪೊಲೀಸ್ ಠಾಣಾ ವ್ಯಾಪ್ತಿಯ 'ಪೊಲೀಸ್ ಜನಸಂಪರ್ಕ ಸಭೆ'ಯು ಶಿರೂರು ಪೇಟೆ ವೆಂಕಟರಮಣ ಸಭಾಭವನದಲ್ಲಿ ಬುಧವಾರ ಜರುಗಿತು. ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಕಾರಿ ಅಣ್ಣಾಮಲೈ ಸಭೆಯಲ್ಲಿ ಭಾಗವಹಿಸಿ ಮಾತನಾಡಿ ಶಿರೂರು ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ರತ್ನಾ ಕೊಠಾರಿ ಅಸಹಜ ಸಾವಿನ ಪ್ರಕರಣದ ಮರಣೋತ್ತರ ಪರೀಕ್ಷೆಯ ಹಾಗೂ ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಬಂದಿದೆ, ಆದರೆ ವರದಿಯಲ್ಲಿ ಅತ್ಯಾಚಾರ, ಕೊಲೆ ಹಾಗೂ ವಿಷ ಜಂತುಗಳ ಕಡಿತದಿಂದ ಸಾವನ್ನಪ್ಪಿದ ಬಗ್ಗೆ ಯಾವುದೇ ಮಾಹಿತಿ ಇಲ್ಲ, ಇದೊಂದು ಸಹಜ ಸಾವು ಎಂದು ದಾಖಲಾಗಿದೆ. ಆದರೆ ಇಲಾಖೆ ಈ ಪ್ರಕರಣದ ಬಗ್ಗೆ ಸಂಶಯಾಸ್ಪದವಾಗಿ ಕಂಡು ಬಂದ 77 ಜನರನ್ನು ವಿಚಾರಣೆ ನಡೆಸಿದ್ದು, ಕೆಲವರು ಪೊಲೀಸರ ಮೇಲೆ ಪ್ರಕರಣ ದಾಖಲಿಸಿದ್ದಾರೆ.  ಇದುವರೆಗೂ ಈ ಪ್ರಕರಣವನ್ನು ಮುಚ್ಚಿ ಹಾಕಿಲ್ಲ, ಇನ್ನು ಒಂದು ತಿಂಗಳು ಈ ಬಗ್ಗೆ ತನಿಖೆ ನಡೆಸಲಾಗುವುದು ಎಂದ ಅವರು ರತ್ನಾ ಕೊಠಾರಿ ಬಡ ಕುಟುಬಂದ ವಿದ್ಯಾರ್ಥಿಯಾಗಿದ್ದು, ಆಕೆಯ ಕುಟುಂಬಕ್ಕೆ ಸರ್ಕಾರ ಪರಿಹಾರ ನೀಡಬೇಕು ಎಂದು ಇಲ್ಲಿನ ಶಾಸಕ ಗೋಪಾಲ ಪೂಜಾರಿ ಅವರು ಅಧಿವೇಶನದಲ್ಲಿ ಆಗ್ರಹಿಸಿದ ಹಿನ್ನೆಲೆಯಲ್ಲಿ ಸರ್ಕಾರ 3 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದೆ. ಈ ಬಗ್ಗೆ ವರದಿ ಕಳುಹಿಸಿಕೊಡುವಂತೆ ಸರ್ಕಾರ ನಮಗೆ ಆದೇಶಿಸಿದೆ. ಆದರೆ ಆಕೆಯ ಪ್ರಕರಣದ ಬಗ್ಗೆ ಇದುವರೆಗೂ ಚಾರ್ಚ್‌ಶೀಟ್ ಸಲ್ಲಿಸದ ಹಿನ್ನೆಲೆಯಲ್ಲಿ ಇದುವರೆಗೂ ವರದಿ ಕಳುಹಿಸಲು ಸಾಧ್ಯವಾಗಿಲ್ಲ, ಇನ್ನೂ ಒಂದು ತಿಂಗಳು ತನಿಖೆ ನಡೆಸಿ ಸರ್ಕಾರಕ್ಕೆ ವರದಿ ಕಳುಹಿಸಲಾಗುವುದು ಎಂದರು.

ಶಿರೂರಿನಂತಹ ಗ್ರಾಮೀಣ ಭಾಗದ ಜನರು ತಮ್ಮ ಚಿಕ್ಕ ಪ್ರಕರಣ ಹೊತ್ತುಕೊಂಡು ಜಿಲ್ಲಾ ಪೋಲೀಸ್ ವರಿಷ್ಠಾಕಾರಿ ಕಛೇರಿ ಅಲೆಯುತ್ತಾರೆ, ಇದಕ್ಕಾಗಿ ಅವರು ಕನಿಷ್ಠ 500ರೂ. ಆದರೂ ವ್ಯಯಿಸಬೇಕಾಗುತ್ತದೆ, ಇದನ್ನು ತಪ್ಪಿಸಲು ಜಿಲ್ಲಾ ಪೋಲೀಸ್ ಇಲಾಖೆ ಗ್ರಾಮೀಣ ಭಾಗದಲ್ಲಿ ಜನಸಂಪರ್ಕ ಸಭೆಯನ್ನು ನಡೆಸಿ, ಜನತೆಯ ಸಮಸ್ಯೆ ಹೇಳಿಕೊಳ್ಳಲು ಸೂಕ್ತ ವೇದಿಕೆ ಕಲ್ಪಿಸಿಕೊಟ್ಟಿದೆ ಎಂದರು. 
ಮಹಿಳೆಯರಿಗೆ ರಾತ್ರಿ ಸಮಯದಲ್ಲಿ ಯಾವುದಾದರೂ ಅಹಿತರ ಘಟನೆಯಿಂದ ತೊಂದರೆಯಾದರೂ ಅವರು ಉಡುಪಿ ಕಂಟ್ರೋಲ್ ರೂಮ್‌ನ 100 ಸಂಖ್ಯೆಗೆ ಉಚಿತ ಕರೆ ಮಾಡಿ, ಮಾಹಿತಿ ನೀಡಬಹುದು ಎಂದ ಅವರು, ಅಲ್ಲಿಯೇ ಮಹಿಳೆಯೊಬ್ಬರಿಂದ ಕಂಟ್ರೋಲ್ ರೂಮಿನ 100 ಸಂಖ್ಯೆ ಕರೆ ಮಾಡಿಸಿದರು. ಅಲ್ಲದೇ ತಮ್ಮ ಮೊಬೈಲ್‌ನಲ್ಲಿ ಸುರಕ್ಷಾ ಆಫ್ ಡೌನ್‌ಲೋಡ್ ಮಾಡಿ ದೂರು ಸಲ್ಲಿಸಬಹುದಾಗಿದೆ ಎಂದರು.

  ರಾಷ್ಟ್ರೀಯ ಹೆದ್ದಾರಿ ಮೇಲೆಯೇ ಬಸ್ ನಿಲುಗಡೆ, ಕಿಡಿಗೇಡಿಗಳು ಸಂಜೆಯ ಸಮಯದಲ್ಲಿ ಶಿರೂರು ಸರ್ಕಾರಿ ಪದವಿಪೂರ್ವ ಕಾಲೇಜಿನ ಕಟ್ಟಡ ಮೇಲೆ ಕಲ್ಲು ಏಸೆದು ಹೆಂಚುಗಳನ್ನು ಹೊಡೆಯುವುದು, ಅತಿವೇಗವಾಗಿ ಬೈಕ್ ಸವಾರಿ, ರಸ್ತೆ ಬದಿಯಲ್ಲಿ ಲಾರಿ ನಿಲ್ಲಿಸಿರುವುದರಿಂದ ಸಾರ್ವಜನಿಕರಿಗೆ ಆಗುವ ತೊಂದರೆ, ಶಿರೂರಿನಲ್ಲಿ ಆಟೋಗಳ ಸಂಖ್ಯೆ ಹೆಚ್ಚಳ, ಮಟ್ಕಾ, ಅಕ್ರಮ ಸಾರಾಯಿ, ಕೋಳಿ ಅಂಕ, ಮೀಟರ್ ಬಡ್ಡಿ ವ್ಯವಹಾರ, ಹೆಚ್ಚಾಗಿ ಅಪಘಾತ ಸಂಭವಿಸುವ ಸ್ಥಳದಲ್ಲಿ ಬ್ಯಾರಿಕೇಡ್ ಅಳವಡಿಸುವಂತೆ, ಭೂ ಮಾಫಿಯಾ, ಮೊದಲಾದ ಸಮಸ್ಯೆಗಳ ಬಗ್ಗೆ ಸಾರ್ವಜನಿಕರು ಎಸ್‌ಪಿಯವರ ಮುಂದೆ ತೋಡಿಕೊಂಡರು. ಇದಕ್ಕೆ ಪ್ರತಿಕ್ರಿಯಿಸಿದ ಅವರು ಮುಂದಿನ ದಿನಗಳಲ್ಲಿ ಪೋಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿದೆ, ಈ ಬಗ್ಗೆ ಇಲಾಖೆಯೊಂದಿಗೆ ಸಾರ್ವಜನಿಕರು ಸಹಕರಿಸಬೇಕು, ಈಗ ಬ್ರಿಟಿಷರ ಕಾಲವಲ್ಲ, ಸಾರ್ವಜನಿಕರು ಯಾವುದೇ ಹಿಂಜರಿಕೆ ಠಾಣೆಗೆ ಬಂದು ಪ್ರಕರಣ ದಾಖಲಿಸಬಹುದು ಎಂದರು.

ಕುಂದಾಪುರ ಡಿವೈಎಸ್‌ಪಿ ಮಂಜುನಾಥ ಶೆಟ್ಟಿ, ಬೈಂದೂರು ವೃತ್ತ ನಿರೀಕ್ಷಕ ಸುದರ್ಶನ್ ಎಂ., ಉಪನಿರೀಕ್ಷಕ ಸಂತೋಷ್ ಕಾಯ್ಕಿಣಿ, ಶಿರೂರು ಗ್ರಾ.ಪಂ. ಸದಸ್ಯ ರಾಮ ಮೇಸ್ತ ಉಪಸ್ಥಿತರಿದ್ದರು. ಪತ್ರಕರ್ತ ಅರುಣಕುಮಾರ್ ಶಿರೂರು ಕಾರ್ಯಕ್ರಮ ನಿರೂಪಿಸಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com