ವಾಸುದೇವ ಭಟ್ ಅವರಿಗೆ ಪತ್ರಿಕೋದ್ಯಮ ದಿನದ ಗೌರವ

ಕುಂದಾಪುರ: ಪತ್ರಕರ್ತರ ವೇದಿಕೆ ಬೆಂಗಳೂರು ಇದರ ಉಡುಪಿ ಜಿಲ್ಲಾ ಘಟಕ ನೀಡುವ ಪತ್ರಿಕಾ ದಿನದ ಗೌರವಕ್ಕೆ ಈ ಭಾರಿ ಹಿರಿಯ ಪತ್ರಕರ್ತ, ಸಂಗೀತ ತಜ್ಞ, ಸಿನಿಮಾ ನಿರ್ದೇಶಕ ನಾದವೈಭವಂ ವಾಸುದೇವ ಭಟ್ ಅವರು ಆಯ್ಕೆಯಾಗಿದ್ದಾರೆ.

   "ಹಿರಿಯರೆಡೆಗೆ ನಮ್ಮ ನಡಿಗೆ" ಧ್ಯೇಯವಾಕ್ಯದೊಂದಿಗೆ ಕಳೆದ ಏಳುವರ್ಷಗಳಿಂದ ಹಿರಿಯ ಪತ್ರಕರ್ತರ ನಿವಾಸಗಳಲ್ಲಿ ಪತ್ರಿಕಾ ದಿನಾಚರಣೆಯನ್ನು ವೇದಿಕೆ ನಡೆಸುತ್ತಾ ಬಂದಿದ್ದು ಪತ್ರಿಕಾ ದಿನದ ಮುನ್ನಾ ದಿನ ಇಂದ್ರಾಳಿಯ ಪತ್ರಕರ್ತರ ಕಾಲೋನಿಯ "ಈಶವಾಸ್ಯಂ"ನಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ಬೆಳಗ್ಗೆ ಕಾರ್ಯಕ್ರಮ ನಡೆಯಲಿದೆ ಎಂದು ವೇದಿಕೆಯ  ಜಿಲ್ಲಾಧ್ಯಕ್ಷ ಶೇಖರ ಅಜೆಕಾರು ತಿಳಿಸಿದ್ದಾರೆ.
       ಈ ಹಿಂದೆ ಅಂಬಾತನಯ ಮುದ್ರಾಡಿ, ವಿದ್ವಾನ್ ಬಿ.ಚಂದ್ರಯ್ಯ, ಉಮೇಶ್ ರಾವ್ ಎಕ್ಕಾರ್, ಎಂ.ವಿ.ಕಾಮತ್, ಎ.ಎಸ್.ಎನ್ ಹೆಬ್ಬಾರ್, ರಾಘವ ನಂಬಿಯಾರ್ ಮೊದಲಾದವರ ನಿವಾಸಗಳಲ್ಲಿ ಈ ಹಿಂದೆ ಈ ವಿಶಿಷ್ಟ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಪತ್ರಕರ್ತರಾಗಿ ವಾಸುದೇವ ಭಟ್
      ಉಡುಪಿ ವಾಸುದೇವ ಭಟ್ ಅವರು ತಮ್ಮ ತಂದೆ ಪತ್ರಕರ್ತರಾಗಿದ್ದ ಯು.ಎಸ್ ಭಟ್ ಅವರಿಂದ ಪ್ರಭಾವಿತರಾಗಿ ಅವರನ್ನೇ ಗುರುಗಳೆಂದು ಸ್ವೀಕರಿಸಿ ಪತ್ರಿಕೋದ್ಯಮಕ್ಕೆ ಪಾದಾರ್ಪಣೆ ಮಾಡಿದ್ದರು. 1961 ರಲ್ಲಿ ತಂದೆಯ ನಿಧನಾನಂತರ ಅವರು ಉಡುಪಿ, ಕುಂದಾಪುರ, ಕಾರ್ಕಳ ತಾಲೂಕುಗಳ ವರದಿಗಾರರಾಗಿ ಸಂಯುಕ್ತ ಕರ್ನಾಟಕ ಮತ್ತು ಮದ್ರಾಸ್ ಮೇಲ್ ಪತ್ರಿಕೆಗಳನ್ನು ಪ್ರತಿನಿಧಿಸಿದರು. ಪ್ರಕಾಶ, ರಾಷ್ಟ್ರಬಂಧು, ಸುಪ್ರಭಾತ ವಾರಪತ್ರಿಕೆಗಳಲ್ಲಿಯೂ ಅವರ ಬರಹಗಳು ಪ್ರಕಟವಾಗುತ್ತಿದ್ದವು. ಎನ್. ಆರ್ ಉಭಯ ಅವರ ಜನರಾಜ್, ಕೆ.ಶ್ಯಾಮರಾಯರ ಪ್ರಜಾಪ್ರಭುತ್ವ ಪತ್ರಿಕೆಗಳ ವರದಿಗಾರರಾಗಿಯೂ ಅವರು ಕಾರ್ಯ ನಿರ್ವಹಿಸಿದ್ದರು. ನವಭಾರತದ ಕೊನೆಯ ಎರಡು ವರ್ಷಗಳ ಕಾಲ ಅವರು ಶುಕ್ರವಾರದ ಸಿನಿಮಾ ಪುಟ ನಿರ್ವಹಣೆ ಮತ್ತು ಸಂಪಾದಕೀಯ ಬರಹಗಳನ್ನು ಬರೆಯುತ್ತಿದ್ದರು. ಪ್ರಧಾನಿ ಇಂದಿರಾ ಗಾಂಧಿ, ಮುಖ್ಯಮಂತ್ರಿ ನಿಜಲಿಂಗಪ್ಪ, ಮೈಸೂರು ಮಹಾರಾಜರಂತಹ ಮಹತ್ವದ ವ್ಯಕ್ತಿಗಳ ಸಾಂದರ್ಭಿಕ ಸಂದರ್ಶನ ಮಾಡಿ ಪ್ರಕಟಿಸಿದ್ದರು. "ಅಂಬಲಪಾಡಿ ದೇವಾಲಯದಲ್ಲಿ ದೇವಿ ದರ್ಶನ" ಸುದ್ದಿ ಆ ಕಾಲದಲ್ಲಿ ರಾಜ್ಯದ ಗಮನ ಸೆಳೆದಿತ್ತು.

     " ಆ ಕಾಲದಲ್ಲಿ ಪತ್ರಿಕೆಗಳು ಮತ್ತು ಪತ್ರಕರ್ತರ ಸಂಖ್ಯೆ ವಿರಳವಾಗಿತ್ತು. ಪತ್ರಕರ್ತರಿಗೆ ಈಗಿನ ಕಾಲಕ್ಕಿಂತ ಹೆಚ್ಚಿನ ಗೌರವ ಸಿಗುತ್ತಿತ್ತು. ಸಿನಿಮಾ ಟಿಕೇಟ್ ತೆಗೆದು ಕೊಳ್ಳುವಾಗ, ರೇಶನ್ ಅಂಗಡಿಗಳ ಕ್ಯೂನಲ್ಲಿ ಜನ ತಾವಾಗಿ ಮುಂದೆ ಕಳುಹಿಸಿ ಗೌರವಿಸುತ್ತಿದ್ದರು" ಎಂದು ಅವರು ಅಂದಿನ ದಿನಗಳನ್ನು ವಾಸುದೇವ ಭಟ್ ನೆನಪಿಸಿಕೊಳ್ಳುತ್ತಾರೆ".
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com