ಕಾರವಾರ-ಬೆಂಗಳೂರು ರೈಲು ವೇಗ ಹೆಚ್ಚಳಕ್ಕೆ ಸಿಪಿಎಂ ಆಗ್ರಹ

ಕುಂದಾಪುರ: ಕಾರವಾರ-ಬೆಂಗಳೂರು ರೈಲಿನ ವೇಗ ಹೆಚ್ಚಿಸುವಂತೆ ಹಾಗೂ ರಾತ್ರಿ ಪ್ರಯಾಣದ ರೈಲು ಸಂಖ್ಯೆ ಹೆಚ್ಚಿಸುವಂತೆ ಆಗ್ರಹಿಸಿ ಸಿಪಿಎಂ (ಐ) ಉಡುಪಿ ಜಿಲ್ಲಾ ಸಮಿತಿ ಆಶ್ರಯದಲ್ಲಿ ಕುಂದಾಪುರದಲ್ಲಿ ನಡೆದ ಸಹಿ ಸಂಗ್ರಹ ಅಭಿಯಾನವನ್ನು ಮಾಜಿ ಶಾಸಕ ಹಾಗೂ ಸಿಪಿಎಂ (ಐ) ರಾಜ್ಯ ಕಾರ್ಯದರ್ಶಿ ಜಿ.ವಿ. ಶ್ರೀರಾಮ ರೆಡ್ಡಿ ಉದ್ಘಾಟಿಸಿದರು.

ಮಾರ್ಚ್‌ 15ರಿಂದ ಬೆಂಗಳೂರು-ಹಾಸನ ರೈಲುದಾರಿಯ 110 ಕಿ.ಮೀ.ನಲ್ಲಿ ಜೋಡಿ ರೈಲು ಹಾಕುವ ಮೂಲಕ ಕನಿಷ್ಠ ಎರಡು ಗಂಟೆ ಪ್ರಯಾಣ ಉಳಿತಾಯವಾಗುತ್ತದೆ ಎಂದು ವಿಭಾಗೀಯ ರೈಲ್ವೆ ಅಧಿಕಾರಿಗಳು ಹೇಳಿಕೆ ನೀಡಿದ್ದರೂ ಈವರೆಗೆ ಯಾಕೆ ಜಾರಿಯಾಗಿಲ್ಲ ಎಂದು ಪ್ರಶ್ನಿಸಿದ ಅವರು, ಉಡುಪಿ ಹಾಗೂ ಬೆಂಗಳೂರು ನಡುವೆ ಸಂಚರಿಸುವ ರೈಲು 15 ಗಂಟೆ ಯಾಕೆ ಸುತ್ತಬೇಕು. ಕಳೆದ ಬಜೆಟ್‌ನಲ್ಲಿ ಅಂದು ರೈಲ್ವೇ ಮಂತ್ರಿಯಾಗಿದ್ದ ಸದಾನಂದ ಗೌಡರು ಮಂಗಳೂರು-ಬೆಂಗಳೂರು ನಡುವೆ ಹೊಸ ರೈಲಿನ ಓಡಾಟ ಪ್ರಕಟಿಸಿದ್ದರೂ ಅದು ಹಗಲು ಸಂಚರಿಸುವುದರಿಂದ ಜಿಲ್ಲೆಗೆ ಹೆಚ್ಚಿನ ಪ್ರಯೋಜನವಾಗುತ್ತಿಲ್ಲ. ಆದ್ದರಿಂದ ಈಗ ಚಲಿಸುತ್ತಿರುವ ರೈಲಿನ ವೇಗವನ್ನು ಹೆಚ್ಚಿಸಲು ಕೂಡಲೇ ಕ್ರಮ ತೆಗೆದುಕೊಳ್ಳಬೇಕು ಹಾಗೂ ರಾತ್ರಿ ಪ್ರಯಾಣದ ಇನ್ನೊಂದು ರೈಲು ಆರಂಭಿಸಬೇಕು ಎಂದು ಆಗ್ರಹಿಸಿದರು.

ಈ ರೈಲು ಸಂಚಾರದ ಅವ್ಯವಸ್ಥೆಯ ಲಾಭವನ್ನು ಖಾಸಗಿ ಬಸ್ಸುಗಳು ಪಡೆದುಕೊಳ್ಳುವ ಮೂಲಕ ಜನರಿಗೆ ದುಬಾರಿ ದರದ ಉಡುಗೊರೆ ನೀಡುತ್ತಿದ್ದಾರೆ. ಆದ್ದರಿಂದ ಈ ಬೇಡಿಕೆ ಈಡೇರಿಸುವ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದರು.

ಈ ಸಂದರ್ಭ ಸಿಪಿಎಂ (ಐ) ಉಡುಪಿ ಜಿಲ್ಲಾ ಸಮಿತಿಯ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ, ಸಿಪಿಎಂ ಮುಖಂಡರಾದ ಕೆ. ಶಂಕರ್‌, ಕುಂದಾಪುರ ವಲಯ ಕಾರ್ಯದರ್ಶಿ ಎಚ್‌. ನರಸಿಂಹ, ಬೈಂದೂರು ವಲಯ ಕಾರ್ಯದರ್ಶಿ ಸುರೇಶ್‌ ಕಲ್ಲಾಗರ, ದಾಸ ಭಂಡಾರಿ, ಮಹಾಬಲ ವಡೇರಹೋಬಳಿ, ರಾಮಚಂದ್ರ ನಾವಡ ಮೊದಲಾದವರು ಉಪಸ್ಥಿತರಿದ್ದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com