ಕೊಟ್ಟ ಸಾಲ ಮರಳಿ ಕೇಳಿದ್ದಕ್ಕೆ ಜೀವ ಬೆದರಿಕೆ - ಜಾತಿನಿಂದನೆ ಪ್ರಕರಣ

ಸುದ್ದಿಗೋಷ್ಟಿಯಲ್ಲಿ ಅಳಲು ತೋಡಿಕೊಂಡ ಸಂತ್ರಸ್ಥ ಮಹಿಳೆ

ಕುಂದಾಪುರ: ತನ್ನ ಅತ್ತೆ ಮಾವನಿಗೇ 18 ಲಕ್ಷ ರೂ. ಕೈಗಡ(ಕೈಸಾಲ)ನೀಡಿದ ರೇಷ್ಮಾ ರಾಜ್ ಎಂಬ ಮಹಿಳೆ ಕೊಟ್ಟ ಹಣವನ್ನು ವಾಪಾಸು ಕೇಳಿದ್ದಕ್ಕೆ ಆಕೆಯ ವಿರುದ್ಧವೇ ಜಾತಿನಿಂದನೆ ಪ್ರಕರಣ ದಾಖಲಿಸಿದ್ದಲ್ಲದೇ ಕೊಲೆ ಬೆದರಿಕೆ ಹಾಕಿದ ಘಟನೆ ನಾವುಂದದಲ್ಲಿ ನಡೆದಿದೆ. ಈ ಬಗ್ಗೆ ಸಂತ್ರಸ್ಥ ಮಹಿಳೆ ಪತ್ರಿಕಾಗೋಷ್ಟಿ ನಡೆಸಿ ತಮ್ಮ ಅಳಲು ತೋಡಿಕೊಂಡರು.

ಘಟನೆಯ ವಿವರ: ಬೆಂಗಳೂರು ನಿವಾಸಿಯಾದ ರೇಷ್ಮಾರಾಜ್, ಕುಂದಾಪುರ ತಾಲೂಕು ಕಿರಿಮಂಜೇಶ್ವರ ಗ್ರಾಮದ ನಾಗೂರು ಮೂಲದ ದಿಲೀಪ್ ರಾಜ್ ಎಂಬವರನ್ನು 2004 ರಲ್ಲಿ ವಿವಾಹವಾಗಿದ್ದರು. ದಿಲೀಪ್ ರಾಜ್ ಬೆಂಗಳೂರಿನಲ್ಲಿ ಉದ್ಯಮಿಯಾಗಿದ್ದು, ಬೆಂಗಳೂರಿನ ಜಯನಗರದ ಬಾಡಿಗೆ ಮನೆಯಲ್ಲಿ ದಂಪತಿ ವಾಸ್ತವ್ಯವಿದ್ದರು. ದಿಲೀಪನ ತಂದೆ ದಿನೇಶ್ ಮತ್ತು ತಾಯಿ ಚಂದ್ರಕಲಾ ಬೆಂಗಳೂರಿನಲ್ಲಿ ಹೋಟೇಲು ಉದ್ಯಮ ನಡೆಸುತ್ತಾ ಮಗನೊಂದಿಗೇ ನೆಲೆಸಿದ್ದರು. ಈ ವೇಳೆ ಅವರು ತಮ್ಮ ಸೊಸೆ ರೇಷ್ಮಾರಾಜ್ ಬಳಿ ಹೋಟೆಲ್ ರಿಪೇರಿ, ಕೆಲಸಗಾರರಿಗೆ ಸಂಬಳ, ಭೂ ವ್ಯವಹಾರ ಎಂದೆಲ್ಲಾ ಹೇಳಿ ಆಗಾಗ ಕೈಗಡ ಪಡೆಯುತ್ತಿದ್ದರು. ಹೀಗೆ ಸೊಸೆಯಿಂದ ಪಡೆದ ಸಾಲವೇ 18 ಲಕ್ಷ ರೂ.ಗಳಾಗಿತ್ತು. ನಂತರ ಮಗ - ಸೊಸೆಯೊಂದಿಗೆ ಸರಿ ಬರದೇ ದಿನೇಶ್ - ಚಂದ್ರಕಲಾ ದಂಪತಿ 2008ರಲ್ಲಿ ಬೆಂಗಳೂರು ತೊರೆದು ನಾಗೂರಿಗೆ ಬಂದು ತಮ್ಮ ಮೂಲಮನೆಯಲ್ಲಿ ವಾಸಿಸತೊಡಗಿದರು. ಸೊಸೆ ರೇಷ್ಮಾ ಸಾಲ ವಾಪಾಸು ಕೇಳಿದಾಗಲೆಲ್ಲಾ ಕೊಡುತ್ತೇವೆ ಎಂದು ಹೇಳುತ್ತಾ ಸಮಯ ಕಳೆಯುತ್ತಿದ್ದರು. 

ಈ ನಡುವೆ ನಾಗೂರಿನಲ್ಲಿನ ದಿನೇಶರ ಭೂಮಿಯಲ್ಲಿನ ಒಂದಂಶ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿಗೆ ವಶಪಡಿಸಿಕೊಂಡಿದ್ದರಿಂದ ಅವರಿಗೆ ಇಲಾಖೆಯಿಂದ ದೊಡ್ಡ ಮೊತ್ತದ ಪರಿಹಾರ ಬಂದಿತು. ಈ ವಿಷಯ ರೇಷ್ಮಾರಿಗೆ ತಿಳಿದಾಗ ಮತ್ತೆ ಸಾಲ ಮರುಪಾವತಿಗಾಗಿ ಮಾವನನ್ನು ಒತ್ತಾಯಿಸಿದರು. ಈಕೆಯ ವರಾತದಿಂದ ಬೇಸರಗೊಂಡಿದ್ದ ದಿನೇಶ ಮತ್ತು ಚಂದ್ರಕಲಾ ದಂಪತಿ ಬೆಂಗಳೂರಿನಲ್ಲಿದ್ದ ಸೊಸೆ ರೇಷ್ಮಾರಾಜರಿಗೆ ಫೋನ್ ಮಾಡಿ ಹಣ ಕೊಡುತ್ತೇವೆ ಎಂದು ಜೂ. 18 ರಂದು ನಾಗೂರಿಗೆ ಕರೆಸಿಕೊಂಡರು. ಸೊಸೆ ನಾಗೂರು ಮನೆಗೆ ತಲುಪುತ್ತಿದ್ದಂತೆಯೇ ಅತ್ತೆ-ಮಾವ, ನಾದಿನಿ ಮಲ್ಲಿಕಾ ಮತ್ತು ಕುಟುಂಬ ಮಿತ್ರ ಜಗದೀಶ ಎಂಬುವರು ಸೇರಿಕೊಂಡು ರೇಷ್ಮಾರವರನ್ನು ಅವಾಚ್ಯವಾಗಿ ಬೈದು ಬಲವಂತದಿಂದ ನಿದ್ದೆ ಮಾತ್ರೆ ನುಂಗಿಸಿದರು. ಮಾತ್ರೆ ಪ್ರಭಾವದಿಂದ ಪ್ರಜ್ಞಾ ಶೂನ್ಯರಾದ ರೇಷ್ಮಾರನ್ನು ಬೈಂದೂರಿನ ನರ್ಸಿಂಗ್ ಹೋಮ್‌ಗೆ ಮತ್ತಲ್ಲಿಂದ, ಕುಂದಾಪುರದ ಚಿನ್ಮಯಿ ಆಸ್ಪತ್ರೆಗೆ ಒಯ್ಯಲಾಯಿತು. ಬಲವಂತವಾಗಿ ಆಕೆಗೆ 30 ನಿದ್ದೆ ಮಾತ್ರೆಗಳನ್ನು ನುಂಗಿಸಿದ್ದರಿಂದ, ಪ್ರಜ್ಞೆ ಕಳೆದುಕೊಂಡ ರೇಷ್ಮಾ ವೈದ್ಯರಿಗಾಗಲೀ, ಪೊಲೀಸರಿಗಾಗಲೀ ಹೇಳಿಕೆಯನ್ನು ನೀಡುವ ಸ್ಥಿತಿಯಲ್ಲಿರಲಿಲ್ಲ. ಆಕೆಯನ್ನು ದಾಖಲಿಸಿದವರೇ ಪೊಲೀಸರಿಗೆ ಏನೋ ಹೇಳಿಕೆಯನ್ನು ನೀಡಿದ್ದು, ಪೊಲಿಸರು ರೇಷ್ಮಾಳ ಹೆಬ್ಬೆಟ್ಟು ಗುರುತು ಪಡೆದಿದ್ದಾರೆ ಎಂದು ರೇಷ್ಮಾ ಆರೋಪಿಸಿದ್ದಾರೆ. 

ರೇಷ್ಮಾರಾಜ್ ಸಂಪೂರ್ಣ ಚೇತರಿಸಿಕೊಂಡಿದ್ದು, ಆಸ್ಪತ್ರೆಯಿಂದ ಬಿಡುಗಡೆಗೊಂಡು ಬೆಂಗಳೂರಿಗೆ ಬಂದ ಬಳಿಕ ಇಬ್ಬರು ಮಕ್ಕಳಿರುವ ಈಕೆಯನ್ನು, ಗಂಡ, ಮಕ್ಕಳನ್ನು ಎಲ್ಲರನ್ನು ಕೊಲ್ಲುವುದಾಗಿ ಅತ್ತೆ-ಮಾವ, ಅವರ ಕಡೆಯವರು ಬೆದರಿಕೆಯೊಡ್ಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ನಡುವೆ ಸೊಸೆ ವಿರುದ್ಧವೇ ಸುಳ್ಳು ಜಾತಿ ನಿಂದನೆ ಕೇಸನ್ನು ದಾಖಲಿಸಿದ್ದಾರೆ. 18 ಲಕ್ಷದಷ್ಟು ದೊಡ್ಡ ಮೊತ್ತದ ಸಾಲವೂ ಮರಳದೇ, ಕೇಸುಗಳ ಭಾರದಿಂದ, ಜೀವಭಯದಿಂದ ಹೈರಾಣಾದ ರೇಷ್ಮಾರಾಜ್ ಇದೀಗ ಕುಂದಾಪುರದ ನ್ಯಾಯಾಲಯದಲ್ಲಿ ಖಾಸಗಿ ಪಿರ್ಯಾದಿ ಸಲ್ಲಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಆಕೆಯೊಂದಿಗೆ ಆಕೆಯ ಪತಿ ದಿಲೀಪ್ ರಾಜ್, ಚಿಕ್ಕಪ್ಪ ಆನಂದ ಗಾಣಿಗ ಇದ್ದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com