ಗಂಗೊಳ್ಳಿ: ಮಗು ಹುಟ್ಟಿ ಬೆಳೆಯುವ ತನಕ ಮಗುವಿಗೆ ನೀಡಬೇಕಾದ ಚಿಕಿತ್ಸೆ, ಚುಚ್ಚುಮದ್ದುಗಳನ್ನು ನೀಡಬೇಕು. ಮನೆಯ ವಾತಾವರಣದ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಮಕ್ಕಳ ಶುಚಿತ್ವದ ಬಗ್ಗೆ ಕೂಡ ಹೆತ್ತವರು ಗಮನ ನೀಡಬೇಕು. ಮಕ್ಕಳು ಪ್ರೌಢಾವಸ್ಥೆಗೆ ಬರುವ ಸಮಯದಲ್ಲಿ ಅವರಿಗೆ ಬೇಕಾದ ಮಾಹಿತಿಗಳನ್ನು ಹಾಗೂ ಇದರ ಬಗ್ಗೆ ಶಿಕ್ಷಣವನ್ನು ನೀಡಬೇಕು ಎಂದು ಗಂಗೊಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಶ್ವೇತಾ ಹೇಳಿದರು.
ಅವರು ಗಂಗೊಳ್ಳಿಯ ಸ.ವಿ.ಪದವಿಪೂರ್ವ ಕಾಲೇಜಿನ ಸಭಾಂಗಣದಲ್ಲಿ ಎಸ್.ವಿ.ಆಂಗ್ಲ ಮಾಧ್ಯಮ ಶಾಲೆಯ ವತಿಯಿಂದ ಜರಗಿದ ಆರೋಗ್ಯ ಮಾಹಿತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕೇಂದ್ರ ಹಾಗೂ ರಾಜ್ಯ ಸರಕಾರಗಳು ಮಕ್ಕಳಿಗೆ ಅನೇಕ ರೀತಿಯ ಚಿಕಿತ್ಸೆ, ಸೌಲಭ್ಯವನ್ನು ನೀಡುತ್ತಿದೆ. ಸ್ನೇಹ ಕ್ಲಿನಿಕ್ ಮೂಲಕ ಹದಿಹರೆಯ ಯುವಕ ಯುವತಿಯರಿಗಾಗಿ ಆಪ್ತ ಸಮಾಲೋಚನೆ ಕಾರ್ಯಕ್ರಮ ನಡೆಸಿ ಅವರ ಸಮಸ್ಯೆಗಳನ್ನು ಅರಿತು ಚಿಕಿತ್ಸೆ ನೀಡುವ ಕಾರ್ಯಕ್ರಮ ನಡೆಸಲಾಗುತ್ತಿದೆ. ಮಲೇರಿಯಾ, ಡೆಂಗು, ಫೈಲೇರಿಯಾ ಮೊದಲಾದ ಕಾಯಿಲೆಗಳನ್ನು ತಡೆಗಟ್ಟಲು ಪರಿಸರ ಶುಚಿತ್ವ ಮಾಡಬೇಕು. ಸೊಳ್ಳೆಗಳು ಉತ್ಪತ್ತಿಯಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಹೇಳಿದರು.
ಶಾಲೆಯ ಮುಖ್ಯೋಪಾಧ್ಯಾಯ ರಾಘವೇಂದ್ರ ಸ್ವಾಗತಿಸಿದರು. ಶಾಲೆಯ ಶಿಕ್ಷಕ-ರಕ್ಷಕ ಸಮಿತಿ ಉಪಾಧ್ಯಕ್ಷ ಬಿ.ರಾಘವೇಂದ್ರ ಪೈ ಅತಿಥಿಗಳನ್ನು ಗೌರವಿಸಿದರು. ಮುಖ್ಯೋಪಾಧ್ಯಾಯಿನಿ ಶಾಂತಿ ಡಿಕೋಸ್ತ ವಂದಿಸಿದರು.
0 comments:
Post a Comment