ಅಧಿಕಾರಿಯ ವರ್ಗಾವಣೆ: ಪೌರ ಕಾರ್ಮಿಕರಿಂದ ಪ್ರತಿಭಟನೆ

ಕುಂದಾಪುರ: ಇಲ್ಲಿನ ಪುರಸಭೆಯಲ್ಲಿ ಹಲವು ವರ್ಷಗಳಿಂದ ಪರಿಸರ ಅಭಿಯಂತರರಾಗಿ ಸೇವೆ ಸಲ್ಲಿಸುತ್ತಿದ್ದ ರಾಘವೇಂದ್ರ ಅವರನ್ನು ಏಕಾಏಕೀ ವರ್ಗಾವಣೆ ಮಾಡಿರುವುದನ್ನು ವಿರೋಧಿಸಿದ ಪುರಸಭೆಯ ಪೌರ ಕಾರ್ಮಿಕರು ಮುಂಜಾನೆಯಿಂದ ಪುರಸಭೆಯ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.  

ಬೆಳಿಗ್ಗೆ ಒಂದು ಹಂತದ ಕೆಲಸ ಮುಗಿಸಿದ ನಂತರ ಪೌರಕಾರ್ಮಿಕರಲ್ಲಿ ಖಾರ್ಯ ಸಿಬ್ಬಂದಿಗಳು ಹಾಗೂ ಗುತ್ತಿಗೆ ಆಧಾರಿತ ಕಾರ್ಮಿಕರೂ ಜೊತೆಯಾಗಿ ಪ್ರತಿಭಟನೆ ನಡೆಸಿ, ಪುರಸಭೆಯ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿಯವರನ್ನು ಭೇಟಿ ಮಾಡಿ ಅಹವಾಲು ಸಲ್ಲಿಸಿದರು.

ರಾಘವೇಂದ್ರ ಅವರ ಅವಧಿಯಲ್ಲಿ ಪೌರಕಾರ್ಮಿಕರಿಗೆ ಎಲ್ಲಾ ಸವಲತ್ತುಗಳು ನ್ಯಾಯಯುತವಾಗಿ ದೊರಕಿದೆ. ಅಲ್ಲದೇ ಕಾರ್ಮಿಕರ ಬಗ್ಗೆ ಕಾಳಜಿಯದ್ದ ಅಭಿಯಂತರರಾಗಿದ್ದು, ಅವರನ್ನು ಹೀಗೇ ಏಕಾಏಕಿ ವರ್ಗಾವಣೆ ಮಾಡಿರುವುದು ಸರಿಯಲ್ಲ ಎಂದು ಆಗ್ರಹಿಸಿದ ಪೌರಕಾರ್ಮಿಕರು, ರಾಘವೇಂದ್ರ ಅವರು ಕುಂದಾಪುರ ಪುರಸಭೆಗೆ ಮರುನೇಮಕ ಮಾಡುವವರೆಗೆ ನಾವು ಕೆಲಸ ಬಹಿಷ್ಕರಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ. ಈ ಸಂದರ್ಭ ಪ್ರತಿಭಟನಾ ನಿರತರನ್ನು ಸಮಾಧಾನಿಸಲೆತ್ನಿಸಿದ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ, ಇದು ಮೇಲಧಿಕಾರಿಗಳ ತೀರ್ಮಾನವಾಗಿದ್ದು ಕಾರ್ಮಿಕರ ಆಗ್ರಹವನ್ನು ಅಧಿಕಾರಿಗಳ ಗಮನಕ್ಕೆ ತರಲಾಗುವುದು. ಪ್ರತಿಭಟನೆಯಿಂದ ಸಮಸ್ಯೆ ಬಗೆಹರಿಯದು ಎಂದಿದ್ದಾರೆ. 
ಆದರೆ ಕಾರ್ಮಿಕರು ತಮ್ಮ ಪಟ್ಟು ಸಡಿಲಿಸಿದೆ ಕೆಲಸಕ್ಕೆ ಗೈರಾಗುವ ಎಚ್ಚರಿಕೆ ನೀಡಿದ್ದಾರೆ. ಇದೇ ಸಂದರ್ಭ ಮುಖ್ಯಾಧಿಕಾರಿಗಳ ಜೊತೆಗೆ ಮಾತನಾಡಲು ಹೋದ ಗುತ್ತಿಗೆ ಆಧಾರದ ಕಾರ್ಮಿಕರನ್ನು ಹೊರಕ್ಕೆ ಕಳುಹಿಸಿದ ಬಗ್ಗೆ ಕಾರ್ಮಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪುರಸಭೆಯ ಅಧಿಕಾರಿಗಳೇ ನಮಗೆ ಕೆಲಸ ಹೇಳುವುದು. ನಮಗೆ ನಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಅವಕಾಶ ನೀಡದಿದ್ದರೆ ನಾವ್ಯಾರ ಹತ್ತಿರ ಹೋಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ ಘಟನೆಯೂ ನಡೆಯಿತು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com