ತ್ರಾಸಿಯಲ್ಲಿ ಸೌಹಾರ್ದ ಇಫ್ತಾರ್ ಕೂಟ

ಕುಂದಾಪುರ: ಕಂಡ್ಲೂರಿನ ಅಲ್‌ಹುದಾ ಚಾರಿಟಬಲ್ ಟ್ರಸ್ಟ್, ಕುಂದಾಪುರ ತಾಲೂಕು ಸದ್ಭಾವನಾ ವೇದಿಕೆ ಮತ್ತು ತ್ರಾಸಿ-ಗಂಗೊಳ್ಳಿ ಲಯನ್ಸ್ ಕ್ಲಬ್ ಸಂಯುಕ್ತ ಆಶ್ರಯದಲ್ಲಿ ತ್ರಾಸಿಯ ಕ್ಲಾಸಿಕ್ ಆಡಿಟೋರಿಯಂನಲ್ಲಿ ಸೌಹಾರ್ದ ಇಫ್ತಾರ್ ಕೂಟ ನಡೆಯಿತು. 
 ಪ್ರಧಾನ ಭಾಷಣ ಮಾಡಿದ ನಿವೃತ್ತ ಉಪನ್ಯಾಸಕ, ಲೇಖಕ ಕೆ. ಶಿವಾನಂದ ಕಾರಂತ ಧರ್ಮಗಳ ನಡುವಿನ ತಾಕಲಾಟದಲ್ಲಿ ಮಾನವ ಧರ್ಮ ಮರೆಯಾಗಿದೆ. ಯಾವ ಧರ್ಮವೂ ದ್ವೇಷವನ್ನು, ಹಿಂಸೆಯನ್ನು, ಯುದ್ಧವನ್ನು ಬೋಧಿಸಿಲ್ಲ. ಧರ್ಮದ ಕುರಿತಾಗಿ ಹಲವರಲ್ಲಿ ಇರುವ ಅರೆ ಮತ್ತು ಶೂನ್ಯ ಜ್ಞಾನ ಧರ್ಮಗಳ ನಡುವೆ ತ್ವೇಷ ಉಂಟಾಗಲು ಕಾರಣ. ಎಲ್ಲ ಜನರು ದೇವರಿಗೆ, ಮಾತಾಪಿತೃಗಳಿಗೆ, ಗುರುಗಳಿಗೆ, ಪರಿಸರಕ್ಕೆ ಮತ್ತು ಸಹಜೀವಿಗಳಿಗೆ ಸಲ್ಲಬೇಕಾಗಿರುವುದನ್ನು ಸಲ್ಲಿಸುತ್ತ ಬದುಕಬೇಕು. ಆಯಾ ಧರ್ಮಗಳನ್ನು ಅನುಸರಿಸುತ್ತ ಎಲ್ಲ ಧರ್ಮೀಯರು ಈ ವಿಚಾರದಲ್ಲಿ ಒಂದಾಗಬೇಕು ಎಂದು ಹೇಳಿದರು. 

ತ್ರಾಸಿ-ಗಂಗೊಳ್ಳಿ ಲಯನ್ಸ್ ಕ್ಲಬ್ ಅಧ್ಯಕ್ಷ ಜಾರ್ಜ್ ಡಿ’ಆಲ್ಮೇಡ ದೇವರನ್ನು ಪ್ರೀತಿಸುವವರು ದೇವರ ಮಕ್ಕಳಾದ ಎಲ್ಲ ಮನುಷ್ಯರನ್ನು ಪ್ರೀತಿಸಬೇಕು ಎಂದರು. 

 ಅಧ್ಯಕ್ಷತೆ ವಹಿಸಿದ್ದ ಮಂಗಳೂರಿನ ಹಿರಾ ಮೀಡಿಯದ ಅಧ್ಯಕ್ಷ ಮಹಮದ್ ಇಸಾಕ್ ಪುತ್ತೂರು ಸೌಹಾರ್ದ ಇಫ್ತಾರ್ ಒಂದು ಉಪಯುಕ್ತ ಕಾರ್ಯಕ್ರಮ. ಇದರಲ್ಲಿ ವಿವಿಧ ಧರ್ಮೀಯರು ಒಂದೆಡೆ ಕಲೆತು ಸೌಹಾರ್ದ ವಾತಾವರಣದಲ್ಲಿ ಪರಸ್ಪರರನ್ನು ಮತ್ತು ಪರ ಧರ್ಮಗಳನ್ನು ಅರಿಯುವ ಅವಕಾಶ ಸಿಗುತ್ತದೆ ಎಂದರು. ಶಾಸಕ ಕೆ. ಗೋಪಾಲ ಪೂಜಾರಿ, ತ್ರಾಸಿ ಹೋಲಿಕ್ರಾಸ್ ಇಗರ್ಜಿಯ ಧರ್ಮಗುರು ಚಾರ್ಲ್ಸ್ ಲೂಯಿಸ್ ಶುಭ ಹಾರೈಸಿದರು. 
ಸದ್ಭಾವನಾ ವೇದಿಕೆಯ ಸಂಚಾಲಕ ಸಬ್ಲಾಡಿ ಮಂಜಯ್ಯ ಶೆಟ್ಟಿ, ಅಲ್‌ಹುದಾ ಚಾರಿಟಬಲ್ ಟಸ್ಟ್‌ನ ಅಧ್ಯಕ್ಷ ಎಸ್. ದಸ್ತಗೀರ್ ಸಾಹೇಬ್, ಉಪಾಧ್ಯಕ್ಷ ಬೆಟ್ಟೆ ಜಿಫ್ರಿ ಸಾಹೇಬ್ ವೇದಿಕೆಯಲ್ಲಿದ್ದರು.  

ಕುಂದಾಪುರ ತಾಲೂಕು ಮಿಲ್ಲತ್ ಫೌಂಡೇಶನ್ ಅಧ್ಯಕ್ಷ ಮೌಲಾನಾ ಝಮೀರ್ ಅಹ್ಮದ್ ರಶಾದಿ ಖುರಾನ್ ಪಠಿಸಿದರು. ಪತ್ರಕರ್ತ ಜಿ. ಎಂ, ಶರೀಫ್ ಹೂಡೆ ಸ್ವಾಗತಿಸಿದರು. ಎಸ್. ಜನಾರ್ದನ ಮರವಂತೆ ಪ್ರಸ್ತಾವನೆಗೈದರು. ಶ್ರೀನಿವಾಸ ಗಾಣಿಗ ವಂದಿಸಿದರು. ಅಲ್‌ಹುದಾ ಚಾರಿಟಬಲ್ ಟ್ರಸ್ಟ್‌ನ ಎಸ್. ಮುನೀರ್ ಅಹ್ಮದ್ ನಿರೂಪಿಸಿದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com