ಜುಲೈ 9: ರತ್ನಾ ಕೊಠಾರಿ ಸಾವಿಗೆ 1ವರ್ಷ - ಬೃಹತ್ ಕಾಲ್ನಡಿಗೆ ಜಾಥಾ

ಬೈಂದೂರು: ಶಿರೂರು ಪದವಿಪೂರ್ವ ಕಾಲೇಜಿನ ಬಡ ವಿದ್ಯಾರ್ಥಿನಿ ಕೋಣನಮಕ್ಕಿಯ ರತ್ನಾಕೊಠಾರಿ ಅನುಮಾನಾಸ್ಪದ ಸಾವು ಸಂಭವಿಸಿ ಇದೇ ಜುಲೈ 9ಕ್ಕೆ ಒಂದು ವರ್ಷ ಪೂರೈಸಲಿದೆ. ಅಂದು ಕಾಲೇಜಿಗೆ ತೆರಳಿದ್ದ ರತ್ನಾ ಕೊಠಾರಿ ತರಗತಿ ಮುಗಿಸಿ ಕೋಣನಮಕ್ಕಿಯಲ್ಲಿರುವ ತನ್ನ ಮನೆಗೆ ವಾಪಾಸು ಬರುವ ಕಾಡಿನ ಹಾದಿಯಲ್ಲಿ ಕಣ್ಮರೆಯಾಗಿದ್ದಳು. ಎರಡು ದಿನಗಳ ನಂತರ ಅದೇ ಹಾದಿಯ ಪೊದೆಯಲ್ಲಿ ಶವವಾಗಿ ದೊರೆತ ಹಿನ್ನಲೆಯಲ್ಲಿ ಬೈಂದೂರು, ಕುಂದಾಪುರಗಳಲ್ಲಿ ನ್ಯಾಯಕ್ಕೆ ಆಗ್ರಹಿಸಿ ಸಾಕಷ್ಟು ಪ್ರತಿಭಟನೆ ನಡೆದು ರಾಜ್ಯವ್ಯಾಪಿ ಸುದ್ದಿಯಾಯಿತು. ಜನತೆಯ, ವಿದ್ಯಾರ್ಥಿಗಳ ಆಕ್ರೋಶ ಗಮನಿಸಿದ ಬೈಂದೂರು ಶಾಸಕರು ಶಾಸಕರ ಪರಿಹಾರ ನಿಧಿಯಿಂದ ಮೃತ ರತ್ನಾಕೊಠಾರಿ ಕುಟುಂಬಕ್ಕೆ ರೂ.3 ಲಕ್ಷ ಪರಿಹಾರ ಘೋಷಣೆ ಮಾಡಿದರು. ಆದರೆ ಕಳೆದ ಒಂದು ವರ್ಷದಿಂದ ಡಿವೈಎಫ್‌ಐ, ಎಸ್‌ಎಫ್‌ಐ, ಸಿಐಟಿಯು ಸಂಘಟನೆಗಳು ಹಲವಾರು ಪ್ರತಿಭಟನೆಗಳನ್ನು ನಡೆಸದಿರೂ ರತ್ನಾ ಕೊಠಾರಿಯ ಅನುಮಾನಾಸ್ಪದ ಸಾವನ್ನು ಪೋಲೀಸ್ ಇಲಾಖೆಗೆ ಇಂದಿಗೂ ಬೇಧಿಸಲು ಸಾಧ್ಯವಾಗಿಲ್ಲ. ಅಲ್ಲದೇ ಒಂದು ವರ್ಷದ ಹಿಂದೆ ಘೋಷಿಸಿದ ಪರಿಹಾರಧನ ಬಡಕುಟುಂಬಕ್ಕೆ ನೀಡುವಲ್ಲಿ ನಿರ್ಲಕ್ಷ್ಯವಹಿಸಿದೆ.

ನ್ಯಾಯಕ್ಕಾಗಿ ವರ್ಷವಿಡೀ ಹೋರಾಟ ನಡೆಸಿದ ಡಿವೈಎಫ್‌ಐ, ಎಸ್‌ಎಫ್‌ಐ, ಸಿಐಟಿಯು ಸಂಘಟನೆಗಳು ಮುಂದಿನ ಹಂತದ ಹೋರಾಟ ನ್ಯಾಯ ಒದಗಿಸಲು ವಿಫಲತೆ ಹಾಗೂ ಪರಿಹಾರಧನ ನೀಡುವಲ್ಲಿ ನಿರ್ಲಕ್ಷ್ಯತನ ಖಂಡಿಸಿ ಜುಲೈ 9 ಗುರುವಾರದಂದು ರತ್ನಾಕೊಠಾರಿ ಶವ ದೊರೆತ ಸ್ಥಳದಿಂದ ಪಾದಯಾತ್ರೆ ನಡೆಸಿ ಬೈಂದೂರು ಶಾಸಕರ ಕಛೇರಿ ಎದುರು ನ್ಯಾಯ ಒದಗಿಸಲು ಆಗ್ರಹಿಸಿ ಪ್ರತಿಭಟಿಸಲಾಗುವುದು. ಈ ಪ್ರತಿಭಟನೆಗೆ ನಾಗರಿಕರು ಭಾಗವಹಿಸಬೇಕೆಂದು ಸಂಘಟನೆಗಳ ಪರವಾಗಿ ರಾಜೇಶ್ ವಡೇರಹೋಬಳಿ, ಸುರೇಶ್ ಕಲ್ಲಾಗರ, ಶ್ರೀಕಾಂತ್ ಹೆಮ್ಮಾಡಿ, ಬೈಂದೂರು ವೆಂಕಟೇಶ್ ಕೋಣಿ, ಗಣೇಶ್ ತೊಂಡೆಮಕ್ಕಿ, ಗಣೇಶ್ ಮೊಗವೀರ ಜಂಟಿ ಪತ್ರಿಕಾಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com