ಡಾ.ಹೆಚ್.ಶಾಂತಾರಾಮ್ ಸಾಹಿತ್ಯ ಪ್ರಶಸ್ತಿ ಪ್ರದಾನ

ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಫಕೀರ ಮುಹಮ್ಮದ್ ಕಟ್ಪಾಡಿ ಅವರ ಕಡವು ಮನೆ ಕೃತಿಗೆ ಡಾ.ಹೆಚ್.ಶಾಂತಾರಾಮ್ ಸಾಹಿತ್ಯ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಪ್ರಶಸ್ತಿಯನ್ನು ಪ್ರದಾನ ಮಾಡಿದ ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಇದರ ಆಡಳಿತಾಧಿಕಾರಿಗಳಾದ ಡಾ. ಹೆಚ್. ಶಾಂತಾರಾಮ್ ಮಾತನಾಡಿ ಕಡವು ಮನೆ ಕಥಾ ಸಂಕಲನ ಸದಭಿರುಚಿಯ ಓದುಗನನ್ನು ಓದಿಸಿಕೊಂಡು ಹೋಗುತ್ತದೆ. ಕೃತಿಯಲ್ಲಿನ ಮೊದಲ ಕಥೆ ಉಡುಪಿ ಮತ್ತು ಸುತ್ತಮುತ್ತಲಿನ ಪರಿಸರದ ಅಂದಿನ ಸ್ಥಿತಿಗತಿಯನ್ನು ಕಣ್ಣಿಗೆ ಕಟ್ಟುವ ರೀತಿಯಲ್ಲಿ ಹೇಳುತ್ತಾ ಹೋಗುತ್ತದೆ. ಇದನ್ನು ಓದಿದಾಗ ಲೇಖಕ ಫಕೀರ ಮುಹಮ್ಮದ್ ಕಟ್ಪಾಡಿ ಅವರ ಕುರಿತು ಆತ್ಮಾಭಿಮಾನ ಬರುತ್ತದೆ. ಇನ್ನೊಂದು ಕಥೆ ಬ್ಯಾರಿ ಸಮುದಾಯದ ವಿವಿಧ ದೃಷ್ಟಿಕೋನಗಳನ್ನು ಪ್ರಚುರಪಡಿಸುತ್ತಾ, ಸಮಾಜದ ಹಲವು ವೈರುಧ್ಯಗಳನ್ನು ತೋರ್ಪಡಿಸುತ್ತದೆ. ಈ ಕಥಾ ಸಂಕಲನವನ್ನು ಎಲ್ಲರು ಓದಲೇಬೇಕು. ಯಾಕೆಂದರೆ ಇದರಲ್ಲಿನ ಹಲವು ಮಾನವೀಯ ನೆಲೆಗಳು ಸುಸ್ಥಿರ ಸಮಾಜದ ಅಗತ್ಯವಾಗಿದೆ. ಅಲ್ಲದೇ ಲೇಖಕರು ನಮ್ಮ ಕಾಲೇಜಿನ ಪ್ರಾಕ್ತನ ವಿದ್ಯಾರ್ಥಿ ಎನ್ನುವುದು ಇನ್ನು ಹೆಚ್ಚಿನ ಹೆಮ್ಮೆಯನ್ನು ತಂದುಕೊಟ್ಟಿದೆ. ನಮ್ಮ ವಿದ್ಯಾರ್ಥಿಗಳ ಸಾಹಿತ್ಯಾಭಿರುಚಿಯನ್ನ ಮತ್ತು ಅವರು  ಉನ್ನತ ಸ್ಥಾನಮಾನಗಳನ್ನು ಪಡೆಯುತ್ತಿರುವುದನ್ನು ಕಂಡಾಗ ಮನಸು ತುಂಬಿಬರುತ್ತದೆ. ಇವರ ಸಾಧನೆಗಳು ಇತರ ವಿದ್ಯಾರ್ಥಿಗಳಿಗೆ ಉತ್ತೇಜನ ನೀಡುತ್ತದೆ. ಅಲ್ಲದೇ ಮುಂದುವರಿದುಕೊಂಡು ಹೋಗಬೇಕು. ಆ ಕೆಲಸ ಆಗಲೇಬೇಕಾಗಿದೆ ಎಂದು ಹೇಳಿದರು. 

ಕೃತಿಗೆ ಡಾ.ಹೆಚ್.ಶಾಂತಾರಾಮ್ ಸಾಹಿತ್ಯ ಪ್ರಶಸ್ತಿಯ ಪುರಸ್ಕೃತ ಶ್ರೀ  ಫಕೀರ ಮುಹಮ್ಮದ್ ಕಟ್ಪಾಡಿ ಅವರ ಮಾತನಾಡಿ ತನ್ನ ಅನುಭವಗಳ ಉದ್ದಕ್ಕೂ ನಾನು ಕಂಡುಕೊಂಡದ್ದು ಮಾನವಿಯತೆ, ಅನ್ಯೋನ್ಯತೆಗಳನ್ನು . ಅವು  ಸಮಾಜದ ಧಾರ್ಮಿಕತೆ ವ್ಯವಸ್ಥೆಯ ಕಟ್ಟುಪಾಡುಗಳನ್ನು  ಮೀರಿ ಸುಖಿ ಸಮಾಜದ ಕ್ಲನೆಯನ್ನು ಎತ್ತಿಹಿಡಿಯುತ್ತವೆ. ಧಾರ್ಮಿಕ ಸಮನ್ವಯತೆಯ ಕುರಿತಂತೆ ನನ್ನ ಅನುಭವಗಳು ಮತ್ತು ನನ್ನ ಮನೆಯ ವಾತಾವರಣಗಳು ಸಹಕಾರಿಯಾಗುರುವುದಲ್ಲದೇ ನನ್ನ ಸಾಹಿತ್ಯರಚನೆಗಳ ಮೇಲು ಪ್ರಭಾವವನ್ನು ಬೀರಿವೆ. ಎಂದು ಹೇಳಿದರು.  

ಕೃತಿಯ ಕುರಿತು ಮಾತನಾಡಿದ ಮೈಸೂರಿನ ಪ್ರೊ.ಕಾಳೇಗೌಡ ನಾಗವಾರ ಮಾತನಾಡಿ  ಫಕೀರ ಮುಹಮ್ಮದ್ ಕಟ್ಪಾಡಿ ಅವರು ಜಾತ್ಯಾತೀತ ಕವಿಯಾಗಿದ್ದಾರೆ ಎನ್ನುವುದು ಹೆಚ್ಚಿನ ಅರ್ಥಪೂರ್ನತೆಯನ್ನು ತಂದುಕೊಡುತ್ತದೆ.  ಅವರ ಕಡವು ಮನೆ  ಕೃತಿಯು ಓದುಗನಲ್ಲಿ ಅನ್ಯೋನ್ಯತೆಯ ಭಾವನೆಯನ್ನು ಹುಟ್ಟಿಸುತ್ತದೆ. ಒಬ್ಬ ಜನಪರ ಕಾಳಜಿಯ ಲೇಖಕನ ಈ ಕೃತಿ ಜನಪರವಾದವನ್ನೆ ರಚನೆಯುದ್ದಕ್ಕೂ ಕಟ್ಟಿಕೊಡುತ್ತದೆ. ಕಥಾ ಸಂಕಲನದುದ್ದಕ್ಕೂ ಸಮಾಜನ ಬಗೆಗಿನ ಕಾಳಜಿ ಇದೆ ಎಂದು ಅಭಿಪ್ರಾಯಪಟ್ಟರು. 

ಈ ಸಂದರ್ಭದಲ್ಲಿ ಕಾಲೇಜಿನ ವಿಶ್ವಸ್ಥ ಮಂಡಳಿಯ ಸದಸ್ಯರಾದ ಶ್ರೀ ಕೆ.ಶಾಂತಾರಾಮ ಪ್ರಭು, ಶ್ರೀ ರಾಜೇಂದ್ರ ತೋಳಾರ್, ಶ್ರೀ ಪ್ರಜ್ಞೇಶ್ ಪ್ರಭು ಮುಂತಾದವರು ಉಪಸ್ಥಿತರಿದ್ದರು. ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಎನ್.ಪಿ.ನಾರಾಯಣ ಶೆಟ್ಟಿ ಸ್ವಾಗತಿಸಿದರು.  ಡಾ.ಹೆಚ್.ಶಾಂತಾರಾಮ್ ಸಾಹಿತ್ಯ ಪ್ರಶಸ್ತಿ ಸಮಿತಿಯ ಸಂಚಾಲಕರಾದ ಡಾ.ರೇಖಾ ಬನ್ನಾಡಿ ಪ್ರಸ್ತಾವಿಕವಾಗಿ ಮಾತನಾಡಿದರು. ಡಾ.ಹೆಚ್.ಶಾಂತಾರಾಮ್ ಸಾಹಿತ್ಯ ಪ್ರಶಸ್ತಿ ಸಮಿತಿಯ ಸದಸ್ಯರಾದ ಶ್ರೀಮತಿ ಜಾನಕಿ ಬ್ರಹ್ಮಾವರ ವಂದಿಸಿದರು. ಉಪನ್ಯಾಸಕ ರಂಜಿತ್‌ಕುಮಾರ ಕಾರ್ಯಕ್ರಮ ನಿರ್ವಹಿಸಿದರು. 

ಇದಕ್ಕು ಮುನ್ನ ಬೆಳಗಿನ ಕಾರ್ಯಕ್ರಮದಲ್ಲಿ ೮೮ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವ  ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಇದರ ಆಡಳಿತಾಧಿಕಾರಿಗಳಾದ ಡಾ.ಹೆಚ್.ಶಾಂತಾರಾಮ್ ಅವರಿಗೆ ಪುಷ್ಪ ನೀಡಿ ಅಭಿನಂದಿಸಲಾಯಿತು. ಅಭಿನಂದನಾ ಭಾಷಣ ಮಾಡಿದ ಶ್ರೀ ಜೆ.ಪಿ ರಾವ್ ಅವರು ಡಾ.ಹೆಚ್.ಶಾಂತಾರಾಮ್ ಅವರು ಸಧಭಿರುಚಿಯ ಶಕ್ತಿಯಾಗಿದ್ದಾರೆ. ವರ ವ್ಯಕ್ತಿತ್ವವೇ ಎಲ್ಲರಿಗೂ ಮಾರ್ಗದರ್ಶಕವಾಗಿದೆ.ಅವರೊಬ್ಬ ಹಲವು ಮುಖಗಳ ಸೃಜನಶೀಲ ಹುಡುಕಾಟದ ವ್ಯಕ್ತಿತ್ವವಾಗಿದ್ದಾರೆ. ಅವರಲ್ಲಿ ಒಬ್ಬ ಶಿಕ್ಷಕ, ಆಡಳಿತಗಾರ, ಶಿಸ್ತಿನ ಸಿಪಾಯಿ, ವಿಜ್ಞಾನಿ ಮತ್ತು ಸದಭಿರುಚಿಯ ಮನೋಭಾವನೆಯುಳ್ಳ ಜ್ಞಾನದಾಹಿಯಾಗಿದ್ದಾರೆ ಎಂದು ಹೇಳಿದರು. 

ಇದರೊಂದಿಗೆ ಕೆ.ಎಸ್.ನರಸಿಂಹಸ್ವಾಮಿ - ನೂರರ ನೆನಪು ಕಾರ್ಯಕ್ರಮದಲ್ಲಿ  ಕೆ.ಎಸ್.ನರಸಿಂಹಸ್ವಾಮಿ ಕವಿತೆಗಳ ಸಾಂಸ್ಕೃತಿಕ ಮಹತ್ವ ಕುರಿತು ಮಾತನಾಡಿದ ಮೈಸೂರಿನ ಪ್ರೊ.ಕಾಳೇಗೌಡ ನಾಗವಾರ ಮಾತನಾಡಿ  ಕೆ.ಎಸ್.ನರಸಿಂಹಸ್ವಾಮಿ ಅವರು ಶ್ರೀಮಂತ ಕನ್ನಡ ಭಾಷೆಯ ಕಾವ್ಯತ್ವದ ಮಾಧುರ‍್ಯವನ್ನು ಹೆಚ್ಚು ಮಾಡಿದಂತಹ ಕವಿ. ಹಲವು ಭಿನ್ನ ಅಭಿಪ್ರಾಯಗಳ ಮಧ್ಯೆಯು ಹೃದಯವಂತ ಹೆಂಗರುಳಿನ ಆರ್ಧ್ರ ಹಾಗೂ ಸಹನೀಯ ಸಧಭಿರುಚಿಯ ಕವಿಯಾಗಿ ಕೆ.ಎಸ್.ನರಸಿಂಹಸ್ವಾಮಿ ಅವರು ನಮ್ಮ ಕಣ್ಣ ಮುಂದೆ ನಿಲ್ಲುತ್ತಾರೆ. ಬದುಕಿನ ಸಂಕೀರ್ಣತೆಯ ಅನುಭವವಗಳನ್ನು ತಮ್ಮ ಕಾವ್ಯಗಳಲ್ಲಿ ಕಟ್ಟಿಹಾಕುವ ವಿಶಾಲ ಚಿಂತನೆಯ ಸರಳ ಸಾಧಾರಣ ಕವಿಯಾಗಿ ಜನಮಾನಸದಲ್ಲಿ ಒಂದಾಗಿದ್ದಾರೆ. ಸಹನೀಯವಾದ ಮಂಗಳಕರ ಸಮಾಜದ ಕಟ್ಟುವಿಕೆಗೆ ಪ್ರೇರಣೆಯಾಗಿದ್ದಾರೆ ಎಂದು ಅಭಿಪ್ರಾಯ ಪಟ್ಟರು. 
ಕೆ.ಎಸ್.ನರಸಿಂಹಸ್ವಾಮಿ ಅವರ ಕಾವ್ಯ ಪ್ರಪಂಚದ ಕುರಿತು ಹೇಳುತ್ತಾ ಸ್ತ್ರೀಯರ ನಮ್ಮ ಭಾರತೀಯ ಸಮಾಜದ ಮಹಿಳಾ ಬದುಕಿನ ದುಸ್ಥತಿಯನ್ನು ಹೆಂಗರುಳಿನ ಮಹತ್ವವನ್ನು ವಿವರಿಸಿದರು. ಸ್ತ್ರೀ ಕರುನಾಮಯಿ.ಸೃಜನಶೀಲೆ, ಸಹನಶೀಲೆಯಾಗಿ ಸುಸ್ಥಿರ ಸಮಾಜದ ರಚನೆಗೆ ಕಾರಣವಾಗಿದ್ದಾಳೆ. ಅಪರಿಮಿತ ಕಷ್ಟ ಬಂದರೂ, ದೌರ್ಜನ್ಯ ನಡೆದರೂ  ಸಹಿಸಿಕೊಂಡು ಸಧಭಿರುಚಿಯ ಸಮಾಜವನ್ನು ಕಟ್ಟುವಲ್ಲಿ ಅವಳ ಪಾತ್ರ ಬಹುದೊಡ್ಡದು. ಈ ಭೂಮಿ ತೂಕದ ಮಹಿಳೆಯನ್ನು ಎಲ್ಲಾ ಧರ್ಮಗಳು ಅನಾಗರಿಕವಾಗಿ ಕಂಡಿವೆ ಎಂದು ವಿಷಾದಿಸಿದರು. 
ಈ ಸಂದರ್ಭದಲ್ಲಿ  ಆಕಾಶವಾಣಿ ಕಲಾವಿದೆ ಉಡುಪಿಯ ದೀಕ್ಷಾ ರಾಮಕೃಷ್ಣ ಮತ್ತು ಸಂಗಡಿಗರಿಂದ ಮೈಸೂರು ಮಲ್ಲಿಗೆ ಕವಿ  ಕೆ.ಎಸ್.ನರಸಿಂಹಸ್ವಾಮಿ ಅವರ ಕಾವ್ಯ ಗಾಯನ ಕಾರ್ಯಕ್ರಮ ಮಾಧುರ‍್ಯಪೂರ್ಣವಾಗಿ ನಡೆಯಿತು. 

ವೇದಿಕೆಯಲ್ಲಿ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಎನ್.ಪಿ.ನಾರಾಯಣ ಶೆಟ್ಟಿ, ಪದವಿ ಪೂರ್ವ ಕಾಲೇಜಿನ ಪ್ರೊ.ಜಿ.ಎಂ.ಗೊಂಡ, ಕಾಲೇಜಿನ ಆಡಳಿತ ಮಂಡಳಿಯ ಸದಸ್ಯರಾದ ಪ್ರಕಾಶ್ ಸೋನ್ಸ್, ಉಪಸ್ಥಿತರಿದ್ದರು. 

ಈ ಸಂದರ್ಭದಲ್ಲಿ ಡಾ.ಹೆಚ್.ಶಾಂತಾರಾಮ್ ಸಾಹಿತ್ಯ ಪ್ರಶಸ್ತಿ ಸಮಿತಿಯ ಸದಸ್ಯರಾದ ಕೋ ಶಿವಾನಂದ ಕಾರಂತ, ಜಾನಕಿ ಬ್ರಹ್ಮಾವರ, ಸಂಚಾಲಕರಾದ ಡಾ.ರೇಖಾ ಬನ್ನಾಡಿ ಉಪಸ್ಥಿತರಿದ್ದರು.  
ವಾಣಿಜ್ಯ ವಿಭಾಗದ ಉಪನ್ಯಾಸಕ ಶ್ರೀ ಅರುಣ ಎ.ಎಸ್ ಕಾರ್ಯಕ್ರಮ ನಿರ್ವಹಿಸಿದರು. 

ಈ ಸಂದರ್ಭದಲ್ಲಿ ಡಾ.ಹೆಚ್.ಶಾಂತಾರಾಮ್ ಸಾಹಿತ್ಯ ಪ್ರಶಸ್ತಿ ಸಮಿತಿಯ ಸದಸ್ಯರಾದ ಕೋ ಶಿವಾನಂದ ಕಾರಂತ, ಜಾನಕಿ ಬ್ರಹ್ಮಾವರ, ಸಂಚಾಲಕರಾದ ಡಾ.ರೇಖಾ ಬನ್ನಾಡಿ ಉಪಸ್ಥಿತರಿದ್ದರು.  
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com