ಆರ್. ಕೆ. ಸಂಜೀವ ರಾವ್ ಜನ್ಮಶತಾಬ್ದಿ ಉದ್ಘಾಟನೆ

ಕುಂದಾಪುರ: ಖಂಬದಕೋಣೆಯ ಆರ್. ಕೆ. ಸಂಜೀವ ರಾವ್ ತಮ್ಮ ಜೀವಿತಾವಧಿಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಲ್ಲಿಸಿದ ಸೇವೆ, ನೀಡಿದ ಕೊಡುಗೆಗಳಿಗಾಗಿ ಜನಮನದಲ್ಲಿ ಶಾಶ್ವತ ಸ್ಥಾನ ಪಡೆದವರು. ಅವರ ಜನ್ಮಶತಾಬ್ದಿ ಸಂದರ್ಭದಲ್ಲಿ ಅವರ ನೆನಪನ್ನು ಚಿರಸ್ಥಾಯಿಯಾಗಿಸುವ ಕೆಲಸ ನಡೆಯಬೇಕು ಎಂದು ಶಾಸಕ ಕೆ. ಗೋಪಾಲ ಪೂಜಾರಿ ಹೇಳಿದರು. 

ಖಂಬದಕೋಣೆ ಸರಕಾರಿ ಪದವಿಪೂರ್ವ ಕಾಲೇಜಿನ ಆರ್. ಕೆ. ಸಂಜೀವ ರಾವ್ ಸ್ಮಾರಕ ಸಭಾಭವನದಲ್ಲಿ ಶನಿವಾರ ಆರ್. ಕೆ. ಸಂಜೀವ ರಾವ್ ಜನ್ಮಶತಾಬ್ದಿ ಉದ್ಘಾಟಿಸಿ ಅವರು ಮಾತನಾಡಿದರು. 

ಸಂಜೀವ ರಾವ್ ಸಂಸ್ಮರಣ ನುಡಿಗಳನ್ನಾಡಿದ ಮಾಜಿ ಶಾಸಕ ಎ. ಜಿ. ಕೊಡ್ಗಿ ಸಂಜೀವ ರಾವ್ ದೂರದರ್ಶಿತ್ವ ಹೊಂದಿದ್ದ ರಾಜಕಾರಣಿಯಾಗಿದ್ದರು. ತಾವು ಉನ್ನತ ಅಧಿಕಾರಕ್ಕೆ ಹಾತೊರೆಯದೆ ಸ್ಥಾನ ಬಯಸಿದ ಇತರ ನಾಯಕರ ಬೆಂಬಲಕ್ಕೆ ನಿಂತರು. ತೀರ ಹಿಂದುಳಿದಿದ್ದ ಬೈಂದೂರು ಪ್ರದೇಶದಲ್ಲಿ ಶಿಕ್ಷಣ, ಸಂಪರ್ಕ ಸೌಲಭ್ಯ ಕಲ್ಪಿಸಲು ಶ್ರಮಿಸಿದರು ಎಂದು ಹೇಳಿದರು. 

ಅಧ್ಯಕ್ಷತೆ ವಹಿಸಿದ್ದ ಇನ್ನೋರ್ವ ಮಾಜಿ ಶಾಸಕ, ಸಂಜೀವ ರಾವ್ ಜನ್ಮಶತಾಬ್ದಿ ಆಚರಣಾ ಸಮಿತಿಯ ಗೌರವಾಧ್ಯಕ್ಷ ಬಿ. ಅಪ್ಪಣ್ಣ ಹೆಗ್ಡೆ ಸಂಜೀವ ರಾವ್ ಅವರೊಂದಿಗಿನ ತಮ್ಮ ಒಡನಾಟವನ್ನು ಸ್ಮರಿಸಿಕೊಂಡು ಅವರು ರಾಜಕೀಯ ಚಟುವಟಿಕೆಗೆ ತಮ್ಮನ್ನು ಸೀಮಿತಗೊಳಿಸಿಕೊಳ್ಳದೆ ಶಿಕ್ಷಣ, ಸಹಕಾರ, ಯಕ್ಷಗಾನ, ಸಂಗೀತ, ನಾಟಕ ಕ್ಷೇತ್ರಗಳಲ್ಲೂ ಸಕ್ರಿಯರಾದರು. ಸ್ವಾರ್ಥರಹಿತರಾಗಿದ್ದ ಅವರು ತಮ್ಮ ಬಗೆಗಿನ ಕಾಳಜಿಯನ್ನು ನಿರ್ಲಕ್ಷಿಸಿ ಅನ್ಯರ ಒಳಿತಿಗಾಗಿ ಶ್ರಮವರಿಯದೆ ದುಡಿದ ಕಾರಣ ಅಕಾಲದಲ್ಲಿ ನಮ್ಮನ್ನಗಲಿದರು. ಅವರ ಸ್ಮರಣೆಗಾಗಿ ವರ್ಷವಿಡೀ ಅವರಿಗೆ ಪ್ರಿಯವಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ಹೇಳಿದರು. 

ಸಮಿತಿಯ ಕಾರ್ಯಾಧ್ಯಕ್ಷ ಎಸ್. ಜನಾರ್ದನ ಸ್ವಾಗತಿಸಿದರು. ಕೆ. ಎಸ್. ಪ್ರಕಾಶ ರಾವ್ ಪ್ರಸ್ತಾವನೆಗೈದರು. ಸಂದೀಪನ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಬಿ. ವಿಶ್ವೇಶ್ವರ ಅಡಿಗ ವಂದಿಸಿದರು. ಸಮಾರಂಭದಲ್ಲಿ ಸುಗಮ ಸಂಗೀತ ಗಾಯಕ ಹೊ. ನ. ರಾಘವೇಂದ್ರ ರಾವ್, ನಿವೃತ್ತ ಅಧ್ಯಾಪಕ, ಪುರೋಹಿತ ಎಂ. ಸುಬ್ಬಣ್ಣ ಭಟ್, ಸ್ಥಳೀಯ ಆಯುರ್ವೇದ ವೈದ್ಯ ಕೆ. ವಿ. ಜಿ. ನಂಬಿಯಾರ್ ಅವರನ್ನು ಸನ್ಮಾನಿಸಲಾಯಿತು. ಡಾ. ಅಶೋಕ್ ಕುಂದಾಪುರ, ಕೆ. ಮಂಗಲಾ, ಕೃಷ್ಣಾ ಬಾಯಿ ಸನ್ಮಾನಿತರನ್ನು ಪರಿಚಯಿಸಿದರು. ರಾಘವೇಂದ್ರ ರಾವ್ ಅವರಿಂದ ಸುಗಮ ಸಂಗೀತ, ಉಡುಪಿ ಯಕ್ಷಗಾನ ಕೇಂದ್ರದ ಕಲಾವಿದರಿಂದ ಸಾಂಪ್ರದಾಯಿಕ ಯಕ್ಷಗಾನ ಕುಣಿತಗಳ ಪ್ರದರ್ಶನ ನಡೆದುವು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com