ರೋಗಗಳ ಬಗ್ಗೆ ಅರಿವು ಮೂಡಿಸಬೇಕಿದೆ : ರಾಘವೇಂದ್ರ ಪೈ

ಕುಂದಾಪುರ: ಮನೆಯ ವಠಾರದಲ್ಲಿ ಶುಚಿತ್ವ ಕಾಪಾಡಿಕೊಳ್ಳುವುದರ ಜೊತೆಗೆ ಪರಿಸರದ ನೈರ್ಮಲ್ಯದ ಕಡೆಗೆ ಜನರು ಹೆಚ್ಚಿನ ಮಹತ್ವ ನೀಡಬೇಕು. ಪರಿಸರದಲ್ಲಿ ನೀರು ನಿಲ್ಲದಂತೆ ಮುಂಜಾಗ್ರತಾ ಕ್ರಮಕೈಗೊಳ್ಳಬೇಕು. ವಿಶೇಷವಾಗಿ ಸಾಂಕ್ರಾಮಿಕ ರೋಗಗಳು ಹರಡುವ ಮತ್ತು ಅದನ್ನು ತಡೆಗಟ್ಟುವ ವಿಧಾನದ ಬಗ್ಗೆ ಜಾಗೃತಿ ಮತ್ತು ಅರಿವು ಮೂಡಿಸುವ ಕೆಲಸ ನಡೆಯಬೇಕು ಎಂದು ಪತ್ರಕರ್ತ  ಬಿ.ರಾಘವೇಂದ್ರ ಪೈ ಹೇಳಿದರು

ಅವರು ಗಂಗೊಳ್ಳಿಯ ಶ್ರೀ ವೀರೇಶ ಮಾಂಗಲ್ಯ ಮಂದಿರದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತ್ರಾಸಿ ವಲಯ ಗಂಗೊಳ್ಳಿಯ ಪಂಚಗಂಗಾವಳಿ ಒಕ್ಕೂಟದ ವತಿಯಿಂದ ಜರಗಿದ ಡೆಂಗ್ಯೂ ಮತ್ತು ಮಲೇರಿಯಾ ತಾಂತ್ರಿಕ ಮಾಹಿತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಗಂಗೊಳ್ಳಿ ಪರಿಸರದಲ್ಲಿ ಮಲೇರಿಯಾ, ಫೈಲೇರಿಯಾ ಮೊದಲಾದ ಅನೇಕ ರೋಗರುಜಿನಗಳು ಹೆಚ್ಚಾಗುತ್ತಿದ್ದು, ಇದನ್ನು ನಿಯಂತ್ರಿಸಲು ಪರಿಸರದ ಸಂಘ ಸಂಸ್ಥೆಗಳು ಪ್ರಯತ್ನಿಸಬೇಕು. ಜನರು ನೈರ್ಮಲ್ಯದ ಬಗ್ಗೆ ಹೆಚ್ಚು ಒತ್ತು ನೀಡಿ ಪರಿಸರವನ್ನು ರೋಗಮುಕ್ತವಾಗಿರಿಸಬೇಕು ಎಂದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತ್ರಾಸಿ ವಲಯದ ನಿಕಟಪೂರ್ವ ಅಧ್ಯಕ್ಷ ಕೃಷ್ಣ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಉಡುಪಿ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿ ಡಾ.ಪ್ರೇಮಾನಂದ ಮಾಹಿತಿ ನೀಡಿದರು. ಒಕ್ಕೂಟದ ಅಧ್ಯಕ್ಷರಾದ ಇಂದಿರಾ ಪೂಜಾರ‍್ತಿ ಮತ್ತು ಗಣೇಶ ಮಡಿವಾಳ ಉಪಸ್ಥಿತರಿದ್ದರು.

ಸೇವಾ ಪ್ರತಿನಿಧಿ ವನಜ ಸ್ವಾಗತಿಸಿದರು. ವಲಯ ಮೇಲ್ವಿಚಾರಕ ಚಂದ್ರ ಮರಾಠೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸುಜಾತಾ, ಕ್ಲೇರಾ, ವಸಂತಿ ಹಾಗೂ ಅಶ್ವಿನಿ ಅತಿಥಿಗಳನ್ನು ಗೌರವಿಸಿದರು. ಕೃಷ್ಣ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com