ರಕ್ಷೆ ಅಜ್ಞಾನ ಅಂಧಕಾರವನ್ನು ದೂರ ಮಾಡುತ್ತದೆ : ಶಿವಾನಂದ ಕಾರಂತ

ಗಂಗೊಳ್ಳಿ: ರಕ್ಷಾ ಬಂಧನ ಕಾರ್ಯಕ್ರಮ ರಾಜ ಮಹಾರಾಜರ ಕಾಲದಿಂದಲೂ ನಡೆದುಕೊಂಡು ಬಂದಿದ್ದು, ರಕ್ಷೆಯ ಸಂಕೇತವಾಗಿ ಇದನ್ನು ನಡೆಸಲಾಗುತ್ತಿತ್ತು. ರಕ್ಷೆಯು ನಮ್ಮಲ್ಲಿನ ಅಜ್ಞಾನ, ಅಂಧಕಾರವನ್ನು ದೂರ ಮಾಡಿ ನಮ್ಮಲ್ಲಿ ನವಚೈತನ್ಯವನ್ನು ಮೂಡಿಸುತ್ತದೆ. ರಕ್ಷಾ ಬಂಧನದ ಇತಿಹಾಸವನ್ನು ಸರಿಯಾಗಿ ಅರ್ಥ ಮಾಡಿಕೊಂಡರೆ ನಮಗೆ ಯಾವ ಭಯವೂ ಇರುವುದಿಲ್ಲ. ರಕ್ಷೆಯು ನಮಗೆ ಶ್ರೀರಕ್ಷೆಯಾಗಬೇಕೇ ಹೊರತು ಸ್ತ್ರೀರಕ್ಷೆಯಾಗಬಾರದು ಎಂದು ಸಾಹಿತಿ ಕೋ.ಶಿವಾನಂದ ಕಾರಂತ್ ಹೇಳಿದರು.

ಅವರು ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಹಿರಿಯ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ಸೇವಾಸಂಗಮ ನಿವೇದಿತಾ ಶಿಶು ಮಂದಿರ ಗಂಗೊಳ್ಳಿ ಮತ್ತು ಗಂಗೊಳ್ಳಿ ರೋಟರಿ ಕ್ಲಬ್ ಇವರ ಜಂಟಿ ಆಶ್ರಯದಲ್ಲಿ ಜರಗಿದ ರಕ್ಷಾ ಬಂಧನ ಕಾರ್ಯಕ್ರಮದಲ್ಲಿ ಮಾತನಾಡಿದರು.

ನಾವು ನಮ್ಮಲ್ಲಿ ಸಜ್ಜನಿಕೆಯನ್ನು ಬೆಳೆಸಿಕೊಳ್ಳಬೇಕು. ನಮ್ಮಲ್ಲಿರುವ ಆತ್ಮಸ್ಥೈರ್ಯ, ಚಿಂತನೆ, ಆನಂದ, ವಿಚಾರಗಳ ರಕ್ಷಣೆಯಾಗಬೇಕು. ಸನಾತನ ಭಾರತೀಯ ಸಂಸ್ಕೃತಿ, ಪರಂಪರೆಯನ್ನು ಅನುಸರಿಸುವ, ಆಚರಣೆ ಮಾಡುವ ಹಾಗೂ ಅವುಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುವ ಕೆಲಸ ನಡೆಯಬೇಕು. ಎಳೆಯ ಮನಸ್ಸುಗಳಲ್ಲಿ ಸಂಸ್ಕಾರವನ್ನು ಮೂಡಿಸುವ ಶಿಶು ಮಂದಿರದ ಚಟುವಟಿಕೆಗಳು ನಿಜವಾಗಿಯೂ ಅರ್ಥಪೂರ್ಣವಾದುದು ಎಂದು ಅವರು ಹೇಳಿದರು.

ಸೇವಾಸಂಗಮ ನಿವೇದಿತಾ ಶಿಶು ಮಂದಿರದ ಅಧ್ಯಕ್ಷ ಶ್ರೀನಿವಾಸ ಎಂ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಾಲೆಯ ಮುಖ್ಯೋಪಾಧ್ಯಾಯಿನಿ ಸುಮನಾ ಎಂ. ಪಡಿಯಾರ್ ಬೌದ್ಧಿಕ್ ನೀಡಿದರು. ಗಂಗೊಳ್ಳಿ ರೋಟರಿ ಕ್ಲಬ್ ಅಧ್ಯಕ್ಷ ಪ್ರದೀಪ ಡಿ.ಕೆ. ಶುಭ ಹಾರೈಸಿದರು. ಇದೇ ಸಂದರ್ಭ ಇತ್ತೀಚಿಗೆ ನಿಧನರಾದ ಶಿಶು ಮಂದಿರದ ಸ್ಥಾಪಕ ಸದಸ್ಯೆ ಗಾಯತ್ರಿ ಪಿ. ಪೈ ಅವರಿಗೆ ನಮನಾಂಜಲಿ ಸಲ್ಲಿಸಲಾಯಿತು. ರೋಟರಿ ಕಾರ್ಯದರ್ಶಿ ಎಂ.ಜಿ.ರಾಘವೇಂದ್ರ ಭಂಡಾರ್‌ಕಾರ್, ಮಾತಾಜಿ ಸುಮನಾ, ಮಾತಾಜಿ ಶೈಲಾ, ಶಿಶು ಮಂದಿರದ ಸದಸ್ಯರಾದ ಉಷಾ ಪಿ.ಮಡಿವಾಳ, ವಿಜಯಶ್ರೀ ವಿ.ಆಚಾರ್ಯ, ಅಶ್ವಿತಾ ಜಿ.ಪೈ, ವಸಂತಿ ಎನ್.ಖಾರ್ವಿ ಮೊದಲಾದವರು ಉಪಸ್ಥಿತರಿದ್ದರು.

ಶಿಶು ಮಂದಿರದ ಸಂಚಾಲಕ ಡಾ.ಕಾಶೀನಾಥ ಪೈ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪತ್ರಕರ್ತ ಬಿ.ರಾಘವೇಂದ್ರ ಪೈ ಕಾರ್ಯಕ್ರಮ ನಿರೂಪಿಸಿ, ಶಿಶು ಮಂದಿರದ ಕಾರ್ಯದರ್ಶಿ ಸವಿತಾ ಯು.ದೇವಾಡಿಗ ವಂದಿಸಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com