ಉದ್ಯೋಗ ಖಾತರಿ ಸಾಮಾಜಿಕ ಲೆಕ್ಕ ಪರಿಶೋಧನೆ ಗ್ರಾಮಸಭೆ

ಅಧಿಕಾರಿಗಳ ಬೆವರಿಳಿಸಿದ ಗ್ರಾಮಸ್ಥರು; ಕೈಗೊಂಡ ನಿರ್ಣಯಗಳಿಗೆ ಅಸಮ್ಮತಿ 
ಕುಂದಾಪುರ: ಗಂಗೊಳ್ಳಿ ಗ್ರಾಮ ಪಂಚಾಯತ್‌ನ ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ 2005ರ ಸಾಮಾಜಿಕ ಲೆಕ್ಕ ಪರಿಶೋಧನೆಯ ವಿಶೇಷ ಗ್ರಾಮಸಭೆ ಬುಧವಾರ ಗಂಗೊಳ್ಳಿಯ ಶ್ರೀ ವೀರೇಶ ಮಾಂಗಲ್ಯ ಮಂದಿರದಲ್ಲಿ ನಡೆಯಿತು.

ಗ್ರಾಮ ಪಂಚಾಯತ್ ಅಧ್ಯಕ್ಷರ ಅನುಪಸ್ಥಿತಿಯಲ್ಲಿ ಗ್ರಾಪಂ ಉಪಾಧ್ಯಕ್ಷರನ್ನು ಕಡೆಗಣಿಸಿ ಗ್ರಾಮಸಭೆ ಆರಂಭಿಸಿದ ಬಗ್ಗೆ ಗ್ರಾಪಂ ಸದಸ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಅಧಿಕಾರಿಗಳೊಂದಿಗೆ ಮಾತಿನ ಚಕಮಕಿ ಕೂಡ ನಡೆಯಿತು. ಇದೇ ಸಂದರ್ಭ ಸಭೆಯಲ್ಲಿ ಹಾಜರಿದ್ದ ಅಧಿಕಾರಿಯೋರ್ವರು ಈ ಸಭೆಗೆ ಗ್ರಾಪಂ.ನ ಅವಶ್ಯಕತೆ ಇಲ್ಲ. ಇದು ಅಧಿಕಾರಿಗಳು ನಡೆಸುವ ಸಭೆ. ಈ ಸಭೆಗೆ ಉದ್ಯೋಗ ಖಾತರಿ ಯೋಜನೆಯ ಫಲಾನುಭವಿಗಳಿದ್ದರೆ ಸಾಕು ಎಂದು ನೀಡಿದ ಹೇಳಿಕೆ ಪಂಚಾಯತ್ ಸದಸ್ಯರನ್ನು ಮತ್ತಷ್ಟು ಕೆರಳಿಸಿತು. ಪಂಚಾಯತ್ ಅವಶ್ಯಕತೆ ಇಲ್ಲ ಎಂದಾದರೆ ಪಂಚಾಯತ್ ಬ್ಯಾನರ್ ತೆಗೆದು ಸಭೆ ನಡೆಸಿ, ಈ ಸಭೆಯ ಖರ್ಚನ್ನು ಕೂಡ ಪಂಚಾಯತ್ ಭರಿಸುವುದಿಲ್ಲ ಎಂದು ಪಟ್ಟು ಹಿಡಿದರು. ಇದೇ ಸಂದರ್ಭ ಗ್ರಾಪಂ ಸದಸ್ಯರು ಹಾಗೂ ಉಪಾಧ್ಯಕ್ಷರನ್ನು ಕಡೆಗಣಿಸಿ, ಅವರ ಮಾತಿಗೆ ಕಿಂಚಿತ್ತೂ ಬೆಲೆ ನೀಡದೆ ಸಭೆ ಮುಂದುವರಿಸಿದಾಗ ಮತ್ತಷ್ಟು ಗೊಂದಲಗಳಿಗೆ ಕಾರಣವಾಯಿತು. 

ಇದೇ ವೇಳೆ ಪಂಚಾಯತ್ ಆಡಳಿತವನ್ನು ಧಿಕ್ಕರಿಸಿ ಗ್ರಾಮಸಭೆಯನ್ನು ನಡೆಸಿದ ಮತ್ತು ಗ್ರಾಮ ಪಂಚಾಯತ್ ಸದಸ್ಯರನ್ನು ಅವಹೇಳನ ಮಾಡಿ ಉದ್ಧತನದ ಮಾತಾಡಿದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹಿಸಿ ಸಭೆಯಲ್ಲಿ ಉಪಸ್ಥಿತರಿದ್ದ ಗ್ರಾಮ ಪಂಚಾಯತ್ ಸದಸ್ಯರು ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರಿಗೆ ದೂರು ನೀಡಿದರು. 

ಸಭೆಯ ಕೊನೆಯಲ್ಲಿ ಸಾರ್ವಜನಿಕರು ಅಹವಾಲು ಸಲ್ಲಿಸಬಹುದು ಎಂದು ಗ್ರಾಮಸಭೆಯ ನೋಡೆಲ್ ಅಧಿಕಾರಿಯವರು ಹೇಳುತ್ತಿದ್ದಂತೆಯೇ ಸಾರ್ವಜನಿಕರು ಸಭೆಯಲ್ಲಿ ಕೈಗೊಂಡ ನಿರ್ಣಯಗಳನ್ನು ಓದಿ ಹೇಳುವಂತೆ ಆಗ್ರಹಿಸಿದರು. ಸಭೆಯಲ್ಲಿ ಕೈಗೊಂಡ ನಿರ್ಣಯಗಳು ಓದುತ್ತಿದಂತೆಯೇ ಗ್ರಾಮಸ್ಥರನ್ನು ಮತ್ತಷ್ಟು ಕೆರಳಿಸಿತು. ನೋಡೆಲ್ ಅಧಿಕಾರಿಗಳನ್ನು ಹಾಗೂ ಸಭೆಯಲ್ಲಿ ಉಪಸ್ಥಿತರಿದ್ದ ಅಧಿಕಾರಿಗಳನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ನಾಗರಿಕರು, ಯೋಜನೆಯಲ್ಲಿ ನಡೆದ ಅವ್ಯವಹಾರವನ್ನು ಮುಚ್ಚಿಡಲು ತುರಾತುರಿಯಲ್ಲಿ ಗ್ರಾಮಸಭೆ ನಡೆಸಿ, ತಪ್ಪು ತಪ್ಪು ನಿರ್ಣಯಗಳನ್ನು ಬರೆಯಲಾಗಿದೆ. ಗ್ರಾಮದಲ್ಲಿ ಯೋಜನೆಯು ಸಮರ್ಪಕವಾಗಿ ಅನುಷ್ಠಾನವಾಗಿಲ್ಲ. ಈವರೆಗೆ ನಡೆದ ಯೋಜನೆಯ ಕಾಮಗಾರಿಗಳ ಸ್ಥಳ ಪರೀಕ್ಷೆ ನಡೆಸಿಲ್ಲ. ಸಭೆ ನಡೆಸಬೇಕೆನ್ನುವ ಉದ್ದೇಶದಿಂದ ಎಲ್ಲವನ್ನು ಮುಚ್ಚಿಟ್ಟು ಸಭೆ ನಡೆಸಿ ನಿರ್ಣಯ ದಾಖಲಿಸಿರುವುದು, ಗ್ರಾಪಂ ಉಪಾಧ್ಯಕ್ಷರು ಹಾಗೂ ಸದಸ್ಯರ ವಿರುದ್ಧ ನಿರ್ಣಯ ಕೈಗೊಂಡಿರುವುದು ಸರಿಯಲ್ಲ ಎಂದು ಸಾರ್ವಜನಿಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ಗ್ರಾಪಂ ಉಪಾಧ್ಯಕ್ಷರು ಹಾಗೂ ಸದಸ್ಯರ ವಿರುದ್ಧ ನಿರ್ಣಯ ಕೈಗೊಳ್ಳುವುದಾದರೆ ಗ್ರಾಪಂ ಆಡಳಿತ ಹಾಗೂ ಸದಸ್ಯರನ್ನು ನಿಂದಿಸಿ ಅವಹೇಳನ ಮಾಡಿದ ಮತ್ತು ಸ್ಥಳೀಯಾಡಳಿತವನ್ನು ಕಡೆಗಣಿಸಿ ಸಭೆ ನಡೆಸಿದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸುವ ನಿರ್ಣಯಕೈಗೊಳ್ಳುವಂತೆ ಒತ್ತಾಯಿಸಿದರು. ಸಾರ್ವಜನಿಕರು ಹಾಗೂ ಅಧಿಕಾರಿಗಳ ನಡುವೆ ಮಾತಿನ ಚಕಮಕಿ ಮುಂದುವರೆಯುತ್ತಿರುವಂತೆಯೇ ಮಧ್ಯಪ್ರವೇಶಿಸಿದ ನೋಡೆಲ್ ಅಧಿಕಾರಿಯವರು ಗ್ರಾಮಸ್ಥರ ಒತ್ತಾಯಕ್ಕೆ ಮಣಿದು ಸಭೆಯಲ್ಲಿ ಕೈಗೊಂಡ ನಿರ್ಣಯಗಳಿಗೆ ಗ್ರಾಮಸ್ಥರ ಸಮ್ಮತಿ ಇಲ್ಲ ಎಂಬ ನಿರ್ಣಯ ದಾಖಲಿಸಿ ಸಭೆಯನ್ನು ಮುಕ್ತಾಯಗೊಳಿಸಿದರು.
ಮೀನುಗಾರಿಕೆ ಇಲಾಖಾಧಿಕಾರಿ ದಿಲೀಪ್ ಕುಮಾರ್ ಸಭೆಯ ಮಾರ್ಗದರ್ಶಿ ಅಧಿಕಾರಿಯಾಗಿದ್ದರು. ಯೋಜನೆಯ ತಾಲೂಕು ಸಂಯೋಜನಾಧಿಕಾರಿ ಮೋಹನಚಂದ್ರ ಕಾಳಾವರಕರ್, ಕೋ-ಆರ್ಡಿನೇಟರ್ ಸುಕುಮಾರ್, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರವೀಣ ಡಿಸೋಜ ಉಪಸ್ಥಿತರಿದ್ದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com