ಕಾಳಾವರ ಗ್ರಾ.ಪಂ: ಬಾರ್ ವಿವಾದಕ್ಕೆ ಬಿತ್ತು ತೆರೆ

ಕುಂದಾಪುರ: ತಾಲೂಕಿನ ಕಾಳಾವರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮದ್ಯದಂಗಡಿಯನ್ನು ಆರಂಭಿಸುವುದಕ್ಕೆ ನಿರಪೇಕ್ಷಣಾ ಪತ್ರ ನೀಡುವ ಕುರಿತಂತೆ ಎದ್ದಿರುವ ವಿವಾದಕ್ಕೆ ಸದ್ಯಕ್ಕೆ ತೆರೆ ಬಿದ್ದಂತಾಗಿದೆ. 

ಇಂದು ಕಾಳಾವರ ಗ್ರಾಮ ಪಂಚಾಯತಿಯಲ್ಲಿ ನಡೆದ ವಿಶೇಷ ಸಭೆಯಲ್ಲಿ ಗ್ರಾಮ ಪಂಚಾಯತ್ ಪಿಡಿಓ ವಿಷಯವನ್ನು ಪ್ರಸ್ತಾಪಿಸಿ ಬಾರ್ ಆರಂಭಿಸಲು ಪರವಾನಿಗೆ ನೀಡವ ಬಗ್ಗೆ ಕಾನೂನು ತಜ್ಞರ ಸಲಹೆಯನ್ನು ಪಡೆಯಲಾಗಿದ್ದು, ಈ ಮೊದಲ ನಿಶ್ಚಿತ ಸ್ಥಳದಲ್ಲಿ ಮದ್ಯದಂಗಡಿಯನ್ನು ತೆರೆಯುವ ಬಗ್ಗೆ ಯಾವುದೇ ಆಕ್ಷೇಪಗಳಿಲ್ಲದ ಕಾರಣ ಪಂಚಾಯತಿಯಿಂದ ನಿರಪೇಕ್ಷಣಾ ಪತ್ರವನ್ನು ನೀಡಬಹುದು ಎಂದರು. ಇದಕ್ಕೆ ಉಪಾಧ್ಯೆಕ್ಷೆ ಶೋಭಾ ಆಚಾರಿ ಹಾಗೂ ಸದಸ್ಯರಾದ ರತ್ನಾಕರ ಶೆಟ್ಟಿ ಹಾಗೂ ಆಕ್ಷೇಪ ವ್ಯಕ್ತಪಡಿಸಿ ಬಾರ್ ತೆರೆದು ಗ್ರಾಮದಲ್ಲಿ ಅಭಿವೃಧ್ದಿ ಕಾರ್ಯಗಳನ್ನು ಮಾಡಬೇಕೆಂದೇನಿಲ್ಲ. ಕಾಳಾವರ ಪಂಚಾಯತ್ ವ್ಯಾಪ್ತಿಯಲ್ಲಿ ಬಾರ್ ತೆರೆಯುವ ಅವಶ್ಯಕತೆಯೂ ಇಲ್ಲ, ಇದಕ್ಕೆ ಅವಕಾಶವನ್ನು ಮಾಡಿಕೊಡಬಾರದು ಎಂದು ಆಗ್ರಹಿಸಿದರು.

ಇತರ ಮೂವರು ಸದಸ್ಯರುಗಳು ಬಾರ್ ವಿಚಾರವಾಗಿ ನಿರ್ಣಯವನ್ನು ಈಗಲೇ ತೆಗೆದುಕೊಳ್ಳುವ ಬದಲಿಗೆ ಅದನ್ನು ಮುಂದೂಡಬೇಕೆಂದು ಕೇಳಿಕೊಂಡರು. ಆದರೆ ಇದಕ್ಕೆ ಸಭೆಯಲ್ಲಿ ಸಮ್ಮತಿ ದೊರೆಯಲಿಲ್ಲ.

ಇನ್ನೋರ್ವ ಸದಸ್ಯರಾದ ಸತೀಶ್ ಪೂಜಾರಿ ಹಾಗೂ ಇತರರು ಕಾನೂನು ಸಲಹೆಯಂತೆ ಅವಕಾಶ ಕಲ್ಪಸಿಕೊಡಬೇಕು. ಅಧ್ಯಕ್ಷರು ಯಾವುದೇ ಒತ್ತಡಕ್ಕೆ ಒಳಗಾಗಬಾರದು ಎಂದು ಕೇಳಿಕೊಂಡರು.

ಸಭೆಯಲ್ಲಿ ಉಪಸ್ಥಿತರಿದ್ದ ೧೬ ಸದಸ್ಯರುಗಳ ಪೈಕಿ ೨ ಸದಸ್ಯರುಗಳು ಆಕ್ಷೇಪ ವ್ಯಕ್ತಪಡಿಸಿದರೇ, ಮೂವರು ಸದಸ್ಯರುಗಳು ನಿರ್ಣಯವನ್ನು ಮುಂದೂಡುವಂತೆ ಕೇಳಿಕೊಂಡರು. ಉಳಿದ ೧೧ ಸದಸ್ಯರುಗಳು ಸಹಮತ ಸೂಚಿಸಿದ್ದರಿಂದ ಬಾರ್ ತೆರೆಯಲು ಅನುಮತಿ ನೀಡುವ ನಿರ್ಣಯವನ್ನು ತೆಗೆದುಕೊಳ್ಳಲಾಯಿತು.

ವಿಶೇಷ ಸಭೆಗೂ ಮುನ್ನ ಕಾಳಾವರ ಗ್ರಾಮ ಪಂಚಾಯತ್ ಅಧ್ಯಕ್ಷರಿಗೆ ಮನವಿ ಸಲ್ಲಿಸಿದ ಗ್ರಾಮಸ್ಥರು ಬಾರ್ ತೆರೆಯಲು ಅವಕಾಶ ಮಾಡಿಕೊಡಬಾರದು ಎಂದು ಆಗ್ರಹಿಸಿದ್ದರು. ಗ್ರಾಮದಲ್ಲಿ ನೂರಾರು ಸಮಸ್ಯೆಗಳಿರುವಾಗ ಬಾರ್ ತೆರೆಯುವ ಬಗ್ಗೆ ವಿಶೇಷ ಸಭೆ ಕರೆಯುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ವಿಶೇಷ ಸಭೆ ಮುಗಿದ ಬಳಿಕ ಗ್ರಾಮ ಪಂಚಾಯತ್ ಸದಸ್ಯೆಯೋರ್ವರನ್ನು ಪಂಚಾಯತ್ ಆವರಣದಿಂದ ಹೊರಗೆ ತಡೆದ ಕೆಲ ಗ್ರಾಮಸ್ಥರು, ಸಭೆಯಲ್ಲಿ ಏನು ನಿರ್ಣಯ ಕೈಗೊಂಡಿದ್ದೀರಿ ಎಂಬ ಬಗ್ಗೆ ತಕ್ಷಣ ಹೇಳಬೇಕು ಎಂದು ಹೇಳಿದ್ದು ವಿವಾದಕ್ಕೆ ಎಡೆಮಾಡಿಕೊಟ್ಟಿತು. ಇದಕ್ಕೆ ಪ್ರತಿಕ್ರಿಯಿಸಿದ ಗ್ರಾಮ ಪಂಚಾಯತ್ ಸದಸ್ಯೆ ನಿರ್ಣಯವನ್ನು ಎಲ್ಲೆಂದರಲ್ಲಿ ಹೇಳಲು ಸಾಧ್ಯವಿಲ್ಲ. ಗ್ರಾಮ ಪಂಚಾಯತ್‌ನಲ್ಲಿ ಆ ಬಗ್ಗೆ ವಿಚಾರಿಸಿ ಎಂದಾಗ ಕ್ಷಣಕಾಲ ಗೊಂದಲದ ವಾತಾವರಣ ಉಂಟಾಯಿತು. ಬಳಿಕ ಸದಸ್ಯೆ ಗ್ರಾಮ ಪಂಚಾಯತ್ ಆವರಣದೊಳಕ್ಕೆ ಬಂದಾಗ ಪರಿಸ್ಥಿತಿ ತಿಳಿಯಾಯಿತು.ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com