ಅಖಂಡ ಭಾರತವನ್ನು ಕಟ್ಟುವ ಸಂಕಲ್ಪ ಮಾಡಬೇಕಿದೆ

ಕುಂದಾಪುರ: ಅಂದಿನ ಗಾಂಧಾರದಿಂದ ಬ್ರಹ್ಮದೇಶದವರೆಗೆ ಜಗತ್ತಿನ ಅತ್ಯಂತ ಹೆಸರುವಾಸಿಯಾದ ಹಿಮಾಲಯದಿಂದ ಸಮುದ್ರದ ವರೆಗೆನ ಅಖಂಡ ಭೂಭಾಗವನ್ನು ಭಾರತ ಎಂದು ಕರೆಯುತ್ತಿದ್ದ ಅಂದಿನ ಭಾರತ ಹೇಗೆ ಅಖಂಡವಾಗಿತ್ತೋ, ಅದೇ ಭಾರತವನ್ನು ಮತ್ತೊಮ್ಮೆ ಕಟ್ಟುವ ಸಂಕಲ್ಪವೇ ಈ ಅಖಂಡ ಭಾರತ ಸಂಕಲ್ಪ ದಿನದ ಉದ್ಧೇಶ ಎಂದು ಹಿಂದೂ ಜಾಗರಣ ವೇದಿಕೆಯ ದಕ್ಷಿಣ ಪ್ರಾಂತ ಸಂಚಾಲಕ ಸತ್ಯಜಿತ್ ಸುರತ್ಕಲ್ ಹೇಳಿದರು. 

ಕುಂದಾಪುರದ ಶ್ರೀ ಮಹಾದೇವಿ ಕುಂತಿಯಮ್ಮ ದೇವಸ್ಥಾನದ ಅಂಗಣದಲ್ಲಿ ತಲ್ಲೂರು ಹಿಂದೂ ಜಾಗರಣಾ ವೇದಿಕೆಯ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಅಖಂಡ ಭಾರತ ಸಂಪಕಲ್ಪ ದಿನವನ್ನು ಉದ್ಘಾಟಿಸಿ ಮಾತನಾಡಿದರು.

ಸ್ವಾಂತಂತ್ರ್ಯಾಪೂರ್ವದಲ್ಲಿ ಅಖಂಡ ಭಾರತದ ರಕ್ಷಣೆಗೆ ಬ್ರಿಟಿಷರ ವಿರುದ್ಧ ಭಾರತೀಯರೆಲ್ಲರೂ ಹೋರಾಟವನ್ನು ರೂಪಿಸಿದ್ದರೋ ಅದೇ ರೀತಿ ಹರಿದು ಹಂಚಿ ಹೋಗುತ್ತಿರುವ ಭಾರತಮಾತೆಯ ರಕ್ಷಣೆಗಾಗಿ ಪಣ ತೊಡಬೇಕಾಗಿದೆ. ದೇಶದ ಮೇಲೆ ನಡೆಯುತ್ತಿರುವ ಆಕ್ರಮಣಗಳನ್ನು ಸಮರ್ಥವಾಗಿ ಎದುರಿಸುವ ಹೋರಾಟಕ್ಕಾಗಿ ಸಿದ್ಧಗೊಳ್ಲಬೇಕಾದ ಅನಿವಾರ್ಯತೆ ಮತ್ತೆ ಭಾರತಕ್ಕೆ ಬಂದಿದೆ. ಎಂದು ಹೇಳಿದ ಅವರು, ಈ ನಿಟ್ಟಿನಲ್ಲಿ ಭಾರತೀಯರಾದ ನಾವೆಲ್ಲರೂ ಸಂಘಟಿತರಾಗುವತ್ತ ದೃಢ ಮನಸ್ಸು ಮಾಡಬೇಕಿದೆ ಎಂದರು.

ದೇಶದಲ್ಲಿ ಭಯೋತ್ಪಾದಕರ ಹೆಸರು ನೆನಪಿಗೆ ಬರುತ್ತದೆ, ರಾಜಕಾರಣಿಗಳನ್ನು ಗುರುತಿಸಿ ಗೌರವಿಸುವ ಪದ್ಧತಿ ಹೆಚ್ಚುತ್ತಿದೆ. ಆದರೆ ಯಾವ ಭಾರತಕ್ಕಾಗಿ, ಯಾವ ಸ್ವಾತಂತ್ರ್ಯಕ್ಕಾಗಿ ಸಾವಿರಾರು ಜನ ಹೋರಾಟಗಾರರು ಈ ನೆಲದಲ್ಲಿ ಬಲಿದಾನ ಮಾಡಿದರೋ ಅವರು ಹೆಸರು ಅಖಂಡ ಭಾರತದಲ್ಲಿ ಮಾಸುತ್ತಿದೆ. ಸ್ವಾತಂತ್ರ್ಯಾನಂತರವೂ ದೇಶದ ಗಡಿಗಳಲ್ಲಿ ವೀರ ಮರಣವನ್ನುಪ್ಪುತ್ತಿರುವ ನೂರಾರು ಸೈನಿಕರು ನಮ್ಮ ಕಲ್ಪನೆಗೂ ನಿಲುಕದ ಸ್ಥಿತಿಯಲ್ಲಿ ನಾವಿದ್ದೇವೆ ಎಂದರೆ ಅದಕ್ಕಿಂತ ದೊಡ್ಡ ದುರಂತ ಈ ಭಾರತದಲ್ಲಿ ಬೇರೊಂದಿಲ್ಲ. ಇತಿಹಾಸಗಳನ್ನು ತಿರುಚಿದ ಬ್ರಿಟಿಷರು ತಿರುಚಿ ನಿರ್ಮಿಸಿದ ಪಠ್ಯಗಳನ್ನೇ ಓದಿಸಿ ಅದನ್ನೇ ನಂಬುವಂತೆ ಮಾಡಲಾಗುತ್ತಿರುವ ಈ ಭಾರತದಲ್ಲಿ ನೈಜ ಇತಿಹಾಸದ ಪುಟಗಳನ್ನು ನಿರ್ಮಿಸುವತ್ತ ಸಂಘಟನಾತ್ಮಕವಾಗಿ ಮುನ್ನುಗ್ಗಬೇಕಾಗಿದೆ ಎಂದವರು ಹೇಳಿದರು 

ಸಭಾ ಕಾರ್ಯಕ್ರಮಕ್ಕೆ ಮುನ್ನ ಉಪ್ಪಿನಕುದ್ರು ಶ್ರೀ ವಾಸುದೇವ ದೇವಸ್ಥಾನದಿಂದ ಮೊದಲ್ಗೊಂಡ ಪಂಜಿನ ಮೆರವಣಿಗೆಯನ್ನು ದಕ್ಷಿಣ ಪ್ರಾಂತ ದೇವಸ್ಥಾನಗಳ ಸಂಪರ್ಕ ಪ್ರಮುಖ್ ಪ್ರೇಮಾನಂದ ಶೆಟ್ಟಿ ಕಟ್ಕೇರೆ ಉದ್ಘಾಟಿಸಿದರು. ಸುಮಾರು ಎರಡೂವರೆ ಕಿ.ಮೀ. ಕಾಲ್ನಡಿಗೆ ಮೆರವಣಿಗೆ ನಡೆಸಲಾಯಿತು. ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿ ಆರ್. ವಸಂತ ಹೆಗ್ಡೆ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಹಿಂದೂ ಜಾಗರಣಾ ವೇದಿಕೆಯ ಜಿಲ್ಲಾಧ್ಯಕ್ಷ ಅರವಿಂದ ಕೋಟೇಶ್ವರ, ವಾಸುದೇವ ಗಂಗೊಳ್ಳಿ, ಕಿರಣ್ ದೇವಾಡಿಗ ತಲ್ಲೂರು ವೇದಿಕೆಯಲ್ಲಿದ್ದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com