ವೀಗನ್ ಫೆಸ್ಟಿವಲ್- ಸಿನರ್ಜಿ ಇನ್ಸ್ಟಿಟ್ಯೂಟ್ ಉದ್ಘಾಟನೆ

 ಬೈಂದೂರು: ಯಳಜಿತ ಗ್ರಾಮದ ಹೊಸೇರಿಯ ಸ್ಥಿತಪ್ರಜ್ಞ ವೀಗನ್ ವನದಲ್ಲಿ ರವಿವಾರ ನಡೆದ 13ನೇ ಸಾತ್ವಿಕ್ ವೀಗನ್ ಫೆಸ್ಟಿವಲ್‌ನಲ್ಲಿ ಕುಂದಾಪುರದ ಕಾರ್ತಿಕ್ ಸ್ಕ್ಯಾನಿಂಗ್ ಸೆಂಟರ್‌ನ ಡಾ. ಬಿ. ವಿ. ಉಡುಪ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಸಿನರ್ಜಿ ಇನ್ಸ್ಟಿಟ್ಯೂಟನ್ನು ಉದ್ಘಾಟಿಸಿದರು. 

ಈ ಸಂದರ್ಭದಲ್ಲಿ ಮಾತನಾಡಿದ ಅವರು ಪರೀಕ್ಷೆಗಳಲ್ಲಿ ಅತ್ಯಧಿಕ ಅಂಕ ಪಡೆದವರಲ್ಲಿ ಬದುಕು ಮತ್ತು ಉದ್ಯೋಗಕ್ಕೆ ಅಗತ್ಯವಾದ ಜ್ಞಾನ ಮತ್ತು ಕೌಶಲಗಳು ಇವೆಯೆಂದು ಭಾವಿಸುವುದು ತಪ್ಪು. ಹಲವು ವಿಷಯಗಳಲ್ಲಿ ಅವರು ಅನ್ಯರನ್ನು ಅವಲಂಬಿಸಬೇಕಾಗುತ್ತದೆ. ಉದ್ಯೋಗಕ್ಕೆ ಆಂಗ್ಲ ಭಾಷಾ ಪ್ರೌಢಿಮೆಯೊಂದಿಗೆ ಅನ್ಯ ಕೌಶಲಗಳು ಅಗತ್ಯ. ಸಿನರ್ಜಿ ಇನ್ಸ್ಟಿಟ್ಯೂಟ್ ಇಂತಹ ಕೌಶಲ್ಯಗಳನ್ನು ಕಲಿಸುವ ಕೇಂದ್ರವಾಗಲಿ ಎಂದು ಹಾರೈಸಿದರು. 

ಭೌತಿಕ ಬದುಕಿಗೆ ಅಧ್ಯಾತ್ಮದ ಲೇಪ ಎಂಬ ಕುರಿತು ಮಾತನಾಡಿದ ತೀರ್ಥಹಳ್ಳಿಯ ಹೆದ್ದೂರಿನ ವನಚೇತನದ ಋಷಿ ದೇವಿತೊ ನಾಗೇಶ್ ಮನುಷ್ಯರಿಗೆ ಅನ್ನ ಮತ್ತು ಜ್ಞಾನ ಸಮಸ್ಯೆಯಾಗದು. ಆದರೆ ಬಯಕೆಗಳನ್ನು ಮಿತಿಗೊಳಿಸುವುದು ದೊಡ್ಡ ಸಮಸ್ಯೆಯಾಗಿದೆ. ಸಮೃದ್ಧಿ ಇದ್ದಲ್ಲಿ ಅಸುರೀ ಪ್ರವೃತ್ತಿ ಮನೆಮಾಡುತ್ತದೆ. ನಿಸರ್ಗಕ್ಕೆ ನಿಕಟವಾಗಿ ಹಿತಮಿತವಾದ, ರುಚಿಶುದ್ಧಿಯ ಬದುಕನ್ನು ರೂಢಿಸಿಕೊಂಡರೆ ಸಮಸ್ಯೆಗಳಿರುವುದಿಲ್ಲ ಎಂದರು. ಸಂಚಾಲಕ ಶಂಕರನಾರಾಯಣ ಸ್ವಾಗತಿಸಿ, ನಿರೂಪಿಸಿದರು. 

ಬೈಂದೂರಿನ ಪಿ. ರವೀಂದ್ರ ಅವರ ಪರಿಸರ ಗೀತೆ, ಮರವಂತೆಯ ಮಾ. ಕೇದಾರ್ ಅವರಿಂದ ಲಘು ಸಂಗೀತ, ಸಿರಸಿ ಹೆಗ್ಗಾರಿನ ರಾಜು ಹೆಗಡೆ ಅವರಿಂದ ಜಲತರಂಗ ವಾದನ ಪ್ರಸ್ತುತಗೊಂಡುವು. ಹೆಗಡೆ ಅವರಿಗೆ ಬೆಂಗಳೂರಿನ ಸತೀಶ್ ರಾಜನ್ ಘಟಂ ಸಾಥ್ ನೀಡಿದರು. ಡಾ. ಬಿ. ವಿ. ಉಡುಪ ಅವರಿಗೆ ವರ್ಷದ ವೀಗನ್ ಪ್ರಶಸ್ತಿ ಪ್ರದಾನ ಮಾಡಲಾಯಿತು. 

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com