ಯಕ್ಷ ಸೌರಭದ ಯಕ್ಷ ದಶಮಿ ಸಮಾರೋಪ

ಕುಂದಾಪುರ: ಯಕ್ಷ ಸೌರಭ ಪ್ರವಾಸಿ ಮೇಳದ ಯಕ್ಷದಶಮಿ ಕಾರ್ಯಕ್ರಮದ ಸಮಾರೋಪ ಸಮಾರಂಭ ಕುಂದಾಪುರ ಬಿ. ಆರ್. ಹಿಂದೂ ರಾಯರ ಶಾಲೆಯ ಸಭಾಂಗಣದಲ್ಲಿ ಚಿನ್ಮಯಿ ಆಸ್ಪತ್ರೆಯ ಡಾ| ಉಮೇಶ್ ಪುತ್ರನ್ ಅವರ ಅಧ್ಯಕ್ಷತೆಯಲ್ಲಿ ಜರಗಿತು. 

ಕರಾವಳಿಯ ಹೆಮ್ಮೆಯ ಜಾನಪದ ಕಲೆಯಾದ ಯಕ್ಷಗಾನವನ್ನು ಬೆಳೆಸುವಲ್ಲಿ ಕಲಾಪೋಷಕರ ಪಾತ್ರ ಪ್ರಧಾನವಾದದ್ದು, ಯಾವುದೇ ಕಾರಣಕ್ಕೂ ಯಕ್ಷಗಾನಕ್ಕೆ ಅಳಿವಿಲ್ಲ, ಯಕ್ಷಗಾನವು ಅಳಿಯದೆ ಉಳಿಯುತ್ತದೆ ಎಂಬುದಕ್ಕೆ ಕುಂದಾಪುರ ಯಕ್ಷೋತ್ಸವದಲ್ಲಿ ಪ್ರತಿ ನಿತ್ಯವು ಉಪಸ್ಥಿತರಿದ್ದ ಪ್ರಜ್ಞಾವಂತ ಪ್ರೇಕ್ಷಕರೇ ಸಾಕ್ಷಿಯಾಗಿದ್ದಾರೆಂದು ಡಾ| ಉಮೇಶ್ ಪುತ್ರನ್‌ರವರು ಹೇಳಿದರು. 

ಕಾರ್ಯಕ್ರಮದ ಪ್ರಾಯೋಜಕರಾದ ಮುಂಬಯಿಯ ಉದ್ಯಮಿ ವಂಡ್ಸೆ ರಾಜು ಮೆಂಡನ್‌ರವರು ಯಕ್ಷ ದಶಮಿಯ ಸನ್ಮಾನವನ್ನು ಸ್ವೀಕರಿಸಿ ಮಾತನಾಡುತ್ತಾ ಮುಂದಿನ ಯಕ್ಷದಶಮಿಗೆ ವಿಶಾಲವಾದ ಸಭಾಂಗಣದ ಬಾಡಿಗೆ ವೆಚ್ಚ ಹಾಗೂ ಸಮಾರೋಪ ಸಮಾರಂಭದಲ್ಲಿ ತೆಂಕು ಹಾಗೂ ಬಡಗುತಿಟ್ಟಿನ ಕೂಡಾಟದ ಪ್ರಾಯೋಜಕತ್ವವನ್ನು ನಾನು ವಯಿಸಿಕೊಳ್ಳುತ್ತೇನೆಂದು ಹೇಳಿದರು.

ಹತ್ತು ದಿನ ನಡೆದ ಯಕ್ಷಗಾನ ಪ್ರಸಂಗಗಳ ಸೂಕ್ಷ್ಮಾವಲೋಕನವನ್ನು ಮಾಡಿದ ಪ್ರಸಂಗಕರ್ತ ಬಸವರಾಜ್ ಶೆಟ್ಟಿಗಾರ್‌ರವರು ವಿಮರ್ಶೆಯನ್ನು ಯಕ್ಷಸಾಹಿತ್ಯದ ಪದ್ಯದೊಂದಿಗೆ ರಚಿಸಿರುವುದನ್ನು ಪ್ರಧಾನ ಭಾಗವತರಾದ ಹೆರಂಜಾಲು ಗೋಪಾಲಗಾಣಿಗರು ಹಾಡಿದಾಗ ಪ್ರೇಕ್ಷಕರು ಹರ್ಷೋದ್ಗಾರದೊಂದಿಗೆ ಸಂತೋಷ ವ್ಯಕ್ತಪಡಿಸಿದರು.

ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ನ್ಯಾಯವಾದಿ ಎ.ಎಸ್.ಎನ್.ಹೆಬ್ಬಾರ್, ವಿದ್ಯುತ್ ಗುತ್ತಿಗೆದಾರರಾದ ಕೆ.ಆರ್.ನಾಯ್ಕ್, ಸರ್ಜನ್ ನರ್ಸಿಂಗ್‌ಹೋಮ್‌ನ ಡಾ| ವಿಶ್ವೇಶ್ವರಯ್ಯ, ಗ್ರಾಮಲೆಕ್ಕಿಗರಾದ ಶಂಕರ ಶೆಟ್ಟಿ ಉಪಸ್ಥಿತರಿದ್ದು ಶುಭ ಹಾರೈಸಿದರು. ಪ್ರವಾಸಿ ಮೇಳದ ಸಂಚಾಲಕರಾದ ಕಲಾವಿದ ಮಹಮದ್ ಗೌಸ್‌ರನ್ನು ಪ್ರಕಾಶ್‌ರಾವ್ ಸನ್ಮಾನಿಸಿ ಗೌರವಿಸಿದರು.

ಹವ್ಯಾಸಿ ಕಲಾವಿದ ದಿವಾಕರ ಶೆಟ್ಟಿಯವರು ಸ್ವಾಗತಿಸದರು, ಹೇರಿಕುದ್ರು ಮಹಾಗಣಪತಿ ಯಕ್ಷಗಾನ ಮಂಡಳಿಯ ಮಹಾಬಲರವರು ಕಾರ್ಯಕ್ರಮವನ್ನು ನಿರೂಪಿಸಿದರೆ, ಮಹಮ್ಮದ್ ಗೌಸ್ ವಂದಿಸಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com