ಗಿಮಮೂಲಿಕೆಗಳನ್ನು ವಿಶ್ವಕ್ಕೆ ಪರಿಚಯಿಸಿದ್ದು ಭಾರತ: ಸಂತೋಷ್ ಗುರೂಜಿ

ಕುಂದಾಪುರ: ಭಾರತದಲ್ಲಿರುವ ಅಸಂಖ್ಯಾತ ಸಸ್ಯ ಮೂಲಗಳು ಬೇರೆಲ್ಲೂ ಕಾಣಲು ಸಾಧ್ಯವಿಲ್ಲ. ಪ್ರಕೃತಿ ನೀಡಿದ ಈ ಕೊಡುಗೆಯನ್ನು ಭಾರತೀಯರು ಚೆನ್ನಾಗಿ ಉಪಯೋಗಿಸಿಕೊಂಡಿದ್ದಾರೆ. ಮಾತ್ರವಲ್ಲದೇ ಗಿಡಮೂಲಿಕೆಗಳ  ಮಹತ್ವದ ಬಗ್ಗೆ  ವಿಶ್ವಕ್ಕೆ  ತಿಳಿಹೇಳಿದ ಹಿರಿಮೆ ನಮ್ಮದು ಎಂದು ಬಾರ್ಕೂರು  ಮಹಾಸಂಸ್ಥಾನ ಪೀಠದ ಡಾ. ಸಂತೋಷ್‌ ಗುರೂಜಿ ಹೇಳಿದರು.

ಅವರು ಕೋಟೇಶ್ವರದ ಗುರುಕುಲ ಸಂಸ್ಥೆಯ ಸಭಾಂಗಣದಲ್ಲಿ ನಡೆದ ಸಾಂಪ್ರದಾಯಿಕ ಸಸ್ಯ ಪದಾರ್ಥಗಳ ಪರಿಚಯ ಸಸ್ಯಾಮೃತ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಬಾಂಡ್ಯ ಎಜ್ಯುಕೇಶನ್‌  ಟ್ರಸ್ಟ್‌  ಅಧ್ಯಕ್ಷ  ಬಸ್ರೂರು ಅಪ್ಪಣ್ಣ ಅಧ್ಯಕ್ಷ ಅಪ್ಪಣ್ಣ ಹೆಗ್ಡೆ ಅಧ್ಯಕ್ಷತೆ ವಹಿಸಿ ಮಾತನಾಡಿ ಪ್ರಾಚೀನ  ಸಸ್ಯ ಸಾಮ್ರಾಜ್ಯದ ಮಹತ್ವದ  ಬಗ್ಗೆ  ಅದರಿಂದ ಆರೋಗ್ಯದ ಮೇಲೆ ಉಂಟಾಗುವ ಪರಿಣಾಮ ಹಿಂದಿನ ಕಾಲದಲ್ಲಿ ಜನರು ಉಪಯೋಗಿಸುತ್ತಿದ್ದ ರೀತಿ  ಹಾಗೂ ಇಂದಿನ ಯುವ ಜನಾಂಗ ಅದನ್ನು ಮರೆಯುತ್ತಿರುವ ಬಗ್ಗೆ  ತಿಳಿ ಹೇಳಿದರು.

ಬಾಂಡ್ಯ ಎಜುಕೇಶನ್‌  ಟ್ರಸ್ಟ್‌ ಜಂಟಿ  ಕಾರ್ಯನಿರ್ವಾಹಕ  ನಿರ್ದೇಶಕ ಬಾಂಡ್ಯ ಕೆ. ಸುಭಾಶ್ಚಂದ್ರ ಶೆಟ್ಟಿ  ಉಪಸ್ಥಿತರಿದ್ದರು. ರಾಮ್‌ ಕಿಶನ್‌ ಹೆಗ್ಡೆ ದಂಪತಿ ಗುರೂಜಿ ಅವರನ್ನು ಗೌರವಿಸಿದರು. ಬಾಂಡ್ಯ ಎಜುಕೇಶನ್‌ ಟ್ರಸ್ಟ್‌ನ ಜಂಟಿ ಕಾರ್ಯನಿರ್ವಾಹಕ ನಿರ್ದೇಶಕಿ ಅನುಪಮಾ ಎಸ್‌. ಶೆಟ್ಟಿ ಪ್ರಸ್ತಾವಿಸಿದರು. ಉಪನ್ಯಾಸಕ ರಾಮಚಂದ್ರ ಹೆಬ್ಟಾರ್‌ ಕಾರ್ಯಕ್ರಮ ನಿರೂಪಿಸಿದರು. ಸಸ್ಯಗಳಿಂದ ತಯಾರಿಸಿದ  ವಿವಿಧ ಖಾದ್ಯಗಳ ಭೋಜನ ಕೂಟ ನಡೆಯಿತು. 

ಮುರಿಯ ಹಣ್ಣಿನ ಕಷಾಯ, ಕಣಿಲೆ - ಧಾರೆಹುಳಿ ಉಪ್ಪಿನಕಾಯಿ, ಎಲೆವರೆಗೆ ಸೊಪ್ಪಿನ ಚಟ್ನಿ, ದಾಸವಾಳ ಹೂವಿನ ಕೋಸಂಬರಿ, ಕೆಸುವಿನ ಚಟ್ನಿ, ಚಗ್ತಿ ಸೊಪ್ಪಿನ ಚಟ್ನಿ, ಕಣಿಲೆ ಪಲ್ಯ, ಬಾಳೆದಿಂಡಿನ ಪಲ್ಯ ,ಪ‌ತ್ರೊಡೆ ಪಲ್ಯ, ಗಜಗಂಡೆ ಸೊಪ್ಪಿನ ಪಲ್ಯ, ಪತ್ರೊಡೆ ಗಾಲಿ, ಬೂದುನೇರಳೆ ಇಡ್ಲಿ  ಮೆಂತೆಸೊಪ್ಪಿನ ಚಿತ್ರಾನ್ನ, ಬಿಲ್ವಪತ್ರೆ, ಬೆಳ್ಳಟ್ಟು ಹೂವಿನ, ಕಾಡುಬದನೆಯ  ತಂಬುಳಿ, ಬಾಳೆದಿಂಡಿನ ಸಾಸಿವೆ, ಪಾಂಡವ ಹರಿಗೆ ಸೊಪ್ಪಿನ ಸಾಸಿವೆ, ಪಳದಿ(ಸಾಂಬಾರ್‌), ಹಲಸಿನ ಬೀಜದ ಸಾರು, ಕೆಸುವಿನ ಕಡುಬು, ಅರಸಿನ ಎಲೆ ಪಾಯಸ (ಸಣ್ಣಕ್ಕಿ), ಮಾವಿನ ಹಣ್ಣಿನ ಹಲ್ವ,  ತೊಡೆದೇವು, ಹಲಸಿನ ಬೀಜದ ಹೋಳಿಗೆ. ನುಗ್ಗೆಸೊಪ್ಪಿನ ಬೋಂಡಾ, ಬಾಳೆಕುಂಡಿಗೆ ಬೋಂಡಾ, ಮಜ್ಜಿಗೆ ಹುಲ್ಲಿನ ಮಜ್ಜಿಗೆ ಮೊದಲಾದ ಸುಮಾರು 29 ವಿವಿಧ ಸಾಂಪ್ರದಾಯಿಕ ಸಸ್ಯ  ಪದಾರ್ಥಗಳನ್ನು  ಭೋಜನದ ಮೂಲಕ  ಪರಿಚಯ ನಡೆಸಲಾಯಿತು. 

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com