ಶ್ರೀಮಾತಾ ಆಸ್ವತ್ರೆ: ವಿಶ್ವ ಆತ್ಮಹತ್ಯೆ ತಡೆ ದಿನಾಚರಣೆ

ಕುಂದಾಪುರ: ಇಂದಿನ ಯುವಕರು ಖಿನ್ನತೆ ಹಾಗೂ ಇತರೇ ಕಾರಣಕ್ಕಾಗಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಆತ್ಮಹತ್ಯೆಯಿಂದಾಗಿ ಮರಣ ಹೊಂದುತ್ತಿದ್ದಾರೆ. ಇಂದು ಇತರೇ ಮಾರಕ ಕಾಯಿಲೆಗಳಿಂದಾಗಿ ಸಾಯುವವರಿಗಿಂತ ಎರಡು ಪಟ್ಟು ಹೆಚ್ಚು ಜನ ಆತ್ಮಹತ್ಯೆ ಮಾಡಿಕೊಂಡು ಸಾಯುತ್ತಿರುವುದು ಆಘಾತಕಾರಿ. ಆತ್ಮಹತ್ಯೆಗೆ ಪ್ರಯತ್ನಿಸುವವರನ್ನು ತಡೆದು, ಸಮಾಲೋಚನೆ ನಡೆಸುವುದಲ್ಲದೇ ಹೀಗೆ ಪ್ರಯತ್ನಿಸುವವರ ಮೇಲೆ ನಿಗಾ ವಹಿಸುವುದು ಅಗತ್ಯ ಎಂದು ಕುಂದಾಪುರ ಶ್ರೀ ಮಾತಾ ಆಸ್ಪತ್ರೆಯ ಮನೋವೈದ್ಯ ಡಾ| ಪ್ರಕಾಶ್ ಸಿ. ತೋಳಾರ್ ಹೇಳಿದರು. 

ಅವರು ಶ್ರೀ ಮಾತಾ ಆಸ್ಪತ್ರೆ ಕುಂದಾಪುರ ಹಾಗೂ ಲಯನ್ಸ್ ಮತ್ತು ಲಯನೆಸ್ ಕ್ಲಬ್ ಬ್ರಹ್ಮಾವರ-ಬಾರ್ಕೂರು ಇವರ ಜಂಟಿ ಆಶ್ರಯದಲ್ಲಿ  ಆಸ್ಪತ್ರೆಯಲ್ಲಿ ಆಯೋಜಿಸಲಾದ ವಿಶ್ವ ಆತ್ಮಹತ್ಯಾ ತಡೆ ದಿನಾಚರಣೆಯಲ್ಲಿ ಸಂಪನ್ಮೂಲ ಆತ್ಮಹತ್ಯೆ ಕಾರಣ ಮತ್ತು ತಡೆಯುವ ಬಗ್ಗೆ ಉಪನ್ಯಾಸ ನೀಡಿದರು.

2007ರ ಸಮೀಕ್ಷೆಯ ಪ್ರಕಾರ ವಿಶ್ವದಲ್ಲಿ ಒಂದು ಲಕ್ಷಕ್ಕೆ ೭ಮಂದಿ ಆತ್ಮಹತ್ಯೆ ಮಾಡಿಕೊಂಡರೇ, 2012ರಲ್ಲಿ 12ಮಂದಿಗೆ ಏರಿದೆ. ವಿಶ್ವದಲ್ಲಿ ವರ್ಷಕ್ಕೆ ೮ಲಕ್ಷ ಜನ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇ ಕರ್ನಾಟಕದಲ್ಲಿ 15,000 ಮಂದಿ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಭಾರತದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವವರಲ್ಲಿ ಪಶ್ಚಿಮ ಬಂಗಾಳ ಹೊರತು ಪಡಿಸಿ ಮತ್ತೆಲ್ಲಡೇ ಗಂಡಸರೇ ಹೆಚ್ಚು. 

ಆತ್ಮಹತ್ಯೆಗೆ ಖಿನ್ನತೆ, ಕೌಟುಂಬಿಕ ಸಮಸ್ಯೆ, ಖಾಯಿಲೆ, ಮಧ್ಯವ್ಯಸನ ಹೀಗೆ ಹತ್ತಾರು ಕಾರಣಗಳಿರುತ್ತವೆ. ಇಂತಹ ಘಟನೆಗಳು ನಡೆದಾಗ ಅದನ್ನು ಮಾಧ್ಯಮಗಳು ವೈಭವೀಕರಿಸಿದರೆ ಅದರಿಂದ ಮತ್ತೊಬ್ಬರಿಗೆ ಪ್ರೇರಣ ನೀಡಿದಂತಾಗುತ್ತದೆ ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಬ್ರಹ್ಮಾವರ-ಬಾರ್ಕೂರು ಲಯನ್ಸ್ ಕ್ಲಬ್ ಅಧ್ಯಕ್ಷ ಪ್ರತಾಪ್ಚಂದ್ರ ಶೆಟ್ಟಿ ಬಿ.ಎಸ್. ಮಾತನಾಡಿ ಇಂದಿನ ಕಾಲಘಟ್ಟದಲ್ಲಿ ನಾವು ಎಲ್ಲರಿಗೂ ಹತ್ತಿರವಾಗಿದ್ದೇವೆ. ಆದರೆ ಮನೆಯ ಕೋಣೆಯಲ್ಲಿರುವವರೇ ದೂರವಾಗಿದ್ದಾರೆ. ತಂತ್ರಜ್ಞಾನದ ಮಾಯೆಯಿಂದ ಸಂಬಂಧಗಳು ಮರೆಯಾಗಿಹೋಗಿದೆ ಎಂದರು.

ಶ್ರೀಮಾತಾ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ| ಸತೀಶ್ ಪೂಜಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬ್ರಹ್ಮಾವರ-ಬಾರ್ಕೂರು ಲಯನೆಸ್ ಕ್ಲಬ್ ಅಧ್ಯಕ್ಷೆ ಜಯಂತಿ ಪಿ. ಶೆಟ್ಟಿ, ಮನೋವೈದ್ಯ ಡಾ| ನಿತಿನ್ ಎ ಶೆಟ್ಟಿ, ಲಯನ್ಸ್ ಕ್ಲಬ್ ನ ಪ್ರಭಾಕರ ಕುಂದರ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಆಸ್ಪತ್ರೆಯ ಮ್ಯಾನೇಜರ್ ವಿಠಲ್ ಸ್ವಾಗತಿಸಿ, ಲಯನ್ಸ್ ಕ್ಲಬ್‌ನ ಪ್ರಭಾಕರ ಕುಂದರ್ ಧನ್ಯವಾದಗೈದರು. ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com