ಸರಸ್ವತಿ ವಿದ್ಯಾಲಯದಲ್ಲಿ ರಸಾಯನಶಾಸ್ತ್ರ ಕಾರ‍್ಯಗಾರ

ಗಂಗೊಳ್ಳಿ: ಉಪನ್ಯಾಸಕರು ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ವಿದ್ಯಾರ್ಥಿಗಳ ಮನೋಭಾವವನ್ನು ಅರ್ಥಮಾಡಿಕೊಂಡು ಅವರ ಮಟ್ಟಕ್ಕೆ ಹೋಗಿ, ವಿದ್ಯಾರ್ಥಿಗಳಿಗೆ ಮನದಟ್ಟಾಗುವ ರೀತಿಯಲ್ಲಿ ಬೋಧನೆ ಮಾಡಿದಾಗ ಮಾತ್ರ ಈ ವೃತ್ತಿಗೆ ಹೆಚ್ಚಿನ ಮಹತ್ವ ಗೌರವ ದೊರೆಯುತ್ತದೆ ಅಲ್ಲದೆ ಉಪನ್ಯಾಸಕ ವೃತ್ತಿ ಸಾರ್ಥಕತೆಯನ್ನು ಕಾಣಲು ಸಾಧ್ಯವಾಗುತ್ತದೆ ಎಂದು ಉಡುಪಿ ಜಿಲ್ಲೆಯ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಆರ್. ಬಿ. ನಾಯಕ್ ಹೇಳಿದರು.

ಅವರು ಉಡುಪಿ ಜಿಲ್ಲಾ ಪದವಿಪೂರ್ವ ಕಾಲೇಜು ರಸಾಯನಶಾಸ್ತ್ರ ಉಪನ್ಯಾಸಕರ ವೇದಿಕೆ ಮತ್ತು ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜು ಗಂಗೊಳ್ಳಿ ಇವರ ಜಂಟಿ ಆಶ್ರಯದಲ್ಲಿ ಉಡುಪಿ ಜಿಲ್ಲಾ ಪದವಿಪೂರ್ವ ಕಾಲೇಜು ರಸಾಯನಶಾಸ್ತ್ರ ಉಪನ್ಯಾಸಕರಿಗೆ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಒಂದು ದಿನದ ಪುನಶ್ಚೇತನ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಪಠ್ಯಪುಸ್ತಕಗಳು ಬದಲಾಗುತ್ತಿರುವ ಈ ಸಮಯದಲ್ಲಿ ಉಪನ್ಯಾಸಕರು ಪಠ್ಯಪುಸ್ತಕಗಳನ್ನು ಸರಿಯಾಗಿ ಅಭ್ಯಸಿಸಿ, ತಮ್ಮ ಸ್ವಂತ ಜ್ಞಾನವನ್ನು ವೃದ್ಧಿ ಮಾಡಿಕೊಂಡು, ತಮ್ಮಲ್ಲಿನ ಜ್ಞಾನವನ್ನು ವಿದ್ಯಾರ್ಥಿಗಳಿಗೆ ನೀಡುವುದರಿಂದ ವಿದ್ಯಾರ್ಥಿಗಳಿಗೆ ಮುಂದಿನ ದಿನಗಳಲ್ಲಿ ಅದು ಉಪಯುಕ್ತವೆನಿಸಲಿದೆ. ಇಂತಹ ಪುನಶ್ಚೇತನ ಶಿಬಿರಗಳಲ್ಲಿ ಉಪನ್ಯಾಸಕರು ಪಾಲ್ಗೊಂಡು ತಮ್ಮಲ್ಲಿನ ಸಮಸ್ಯೆಗಳನ್ನು ಪರಿಹರಿಸಿಕೊಂಡು ವಿದ್ಯಾರ್ಥಿಗಳಿಗೆ ಮುಂದಿನ ತಮ್ಮ ಶೈಕ್ಷಣಿಕ ಬದುಕಿನಲ್ಲಿ ಉಪಯೋಗವಾಗುವಂತಹ ಬೋಧನೆ ನಡೆಸಬೇಕು ಎಂದರು.

ಉಡುಪಿ ಜಿಲ್ಲಾ ಪದವಿಪೂರ್ವ ಕಾಲೇಜು ರಸಾಯನಶಾಸ್ತ್ರ ಉಪನ್ಯಾಸಕರ ವೇದಿಕೆಯ ಅಧ್ಯಕ್ಷ ಎಸ್. ನಾಗೇಶ ಶ್ಯಾನುಭಾಗ್ ಅಧ್ಯಕ್ಷತೆ ವಹಿಸಿದ್ದರು. ಗಂಗೊಳ್ಳಿ ಜಿಎಸ್‌ವಿಎಸ್ ಅಸೋಷಿಯೇಶನ್‌ನ ಕಾರ್ಯದರ್ಶಿ ಎಚ್. ಗಣೇಶ್ ಕಾಮತ್, ಶಾಲೆಯ ಸಂಚಾಲಕ ಎನ್.ಸದಾಶಿವ ನಾಯಕ್, ಸಂಪನ್ಮೂಲ ವ್ಯಕ್ತಿಗಳಾದ ಪ್ರೊ.ಲಕ್ಷ್ಮಣ್ ರಾವ್, ಜಯಚಂದ್ರ ಬಲ್ಲಾಳ್, ವಸಂತ ಆಚಾರ್ಯ, ಉಡುಪಿ ಜಿಲ್ಲಾ ಪದವಿಪೂರ್ವ ಕಾಲೇಜು ರಸಾಯನಶಾಸ್ತ್ರ ಉಪನ್ಯಾಸಕರ ವೇದಿಕೆಯ ಕಾರ್ಯದರ್ಶಿ ಕೃಷ್ಣಮೂರ್ತಿ ಉಪಸ್ಥಿತರಿದ್ದರು.

ಕಾಲೇಜಿನ ಪ್ರಾಂಶುಪಾಲ ಆರ್.ಎನ್.ರೇವಣ್‌ಕರ್ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಉಪನ್ಯಾಸಕ ಸುಜಯೀಂದ್ರ ಹಂದೆ ಕಾರ್ಯಕ್ರಮ ನಿರೂಪಿಸಿದರು. ಉಡುಪಿ ಜಿಲ್ಲೆಯ ವಿವಿಧ ಪದವಿಪೂರ್ವ ಕಾಲೇಜುಗಳು ಸುಮಾರು 70ಕ್ಕೂ ಮಿಕ್ಕಿ ಉಪನ್ಯಾಸಕರು ಶಿಬಿರದಲ್ಲಿ ಪಾಲ್ಗೊಂಡಿದ್ದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com